ಗದಗ: ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದ್ದು, ವಿಶೇಷ ಅಭಿಯಾನ ನಡೆಸಿದೆ.
1.04.2026 ರಿಂದ 6.04.2026 ರವರೆಗೆ ನಡೆಸಿದ ವಿಶೇಷ ಜಾರಿ ಅಭಿಯಾನದಲ್ಲಿ ಮಟ್ಕಾ, ಜೂಜು, ಅಕ್ರಮ ಮರಳು ಗಣಿಗಾರಿಕೆ ಹಾಗೂ ಅಬಕಾರಿ ಉಲ್ಲಂಘನೆಗೆ ಸಂಬಂಧಿಸಿದಂತೆ ಭರ್ಜರಿ ಬೇಟೆಯಾಡಲಾಗಿದೆ.
ಕಳೆದ ಆರು ದಿನಗಳಲ್ಲಿ ನಡೆಸಿದ ದಾಳಿಯಲ್ಲಿ ಒಟ್ಟು 38 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 66 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಟ್ಕಾ ದಂಧೆ: 11 ಪ್ರಕರಣಗಳು ದಾಖಲಾಗಿದ್ದು, 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಜೂಜಾಟ: 3 ಕಡೆಗಳಲ್ಲಿ ದಾಳಿ ನಡೆಸಿ, ಬರೋಬ್ಬರಿ 29 ಜನರನ್ನು ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಅಕ್ರಮ: ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡುತ್ತಿದ್ದ 11 ಪ್ರಕರಣಗಳನ್ನು ಪತ್ತೆಹಚ್ಚಿ 11 ಜನರನ್ನು ಬಂಧಿಸಲಾಗಿದೆ.
ಬೆಟ್ಟಿಂಗ್ ಹಾವಳಿ: ಕ್ರಿಕೆಟ್ ಹಾಗೂ ಇತರ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ 3 ಪ್ರಕರಣ ದಾಖಲಾಗಿದ್ದು, 5 ಆರೋಪಿಗಳನ್ನು ಬಂಧಿಸಲಾಗಿದೆ.
ಮರಳು ಮಾಫಿಯಾಗೆ ಬಿಸಿ ಮುಟ್ಟಿಸಿದ ಪೊಲೀಸರು!
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸರು, ಈ ಅವಧಿಯಲ್ಲಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ 9 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ (DMG) ಹಾಗೂ ಆರ್‌ಟಿಒ (RTO) ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 1,70,204 ರೂಪಾಯಿಗಳ ಭಾರಿ ದಂಡವನ್ನು ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ತಿಳಿಸಿದ್ದಾರೆ.