ಗದಗ: ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 2.091 ಕೆ.ಜಿ. ಗಾಂಜಾವನ್ನು ಗದಗ ಜಿಲ್ಲೆಯ ನರೇಗಲ್ ಪೊಲೀಸರು ಜಪ್ತಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಜಪ್ತಿ ಮಾಡಲಾದ ಗಾಂಜಾದ ಅಂದಾಜು ಮೌಲ್ಯ ₹1,04,550 ಎಂದು ಪೊಲೀಸರು ತಿಳಿಸಿದ್ದಾರೆ.
ಅ.5ರಂದು ಬೀಟ್ ಸಿಬ್ಬಂದಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ನರೇಗಲ್ ಪಟ್ಟಣದ ಈಶ್ವರ ನಗರದಲ್ಲಿರುವ ಬಸವರಾಜ್ ತಂದೆ ಕಟ್ಟಪ್ಪ ಹರಣಶಿಕಾರಿ ಎಂಬಾತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು.
ದಾಳಿ ವೇಳೆ ಮನೆಯ ದೇವರ ಕೋಣೆಯಲ್ಲಿದ್ದ ಕಟ್ಟೆಯ ಮೇಲೆ ಬ್ರೌನ್ ಬಣ್ಣದ ಟಿಕ್ಸು ಟೇಪ್‌ನಿಂದ ಸುತ್ತಿದ ಪಾಕೆಟ್ ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಒಣಗಿದ ಎಲೆಗಳು ಹಾಗೂ ಬೀಜಗಳನ್ನು ಒಳಗೊಂಡ ಗಾಂಜಾ ಇರುವುದು ದೃಢಪಟ್ಟಿದೆ. ಒಟ್ಟು 2.091 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಲಾಗಿದೆ.
ಪೊಲೀಸರ ವಿಚಾರಣೆಯಲ್ಲಿ ಆರೋಪಿ ಗಾಂಜಾವನ್ನು ಮಹಾರಾಷ್ಟ್ರದಿಂದ ತಂದು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆಯೂ ಗಾಂಜಾ ಪ್ರಕರಣದಲ್ಲಿ ಆರೋಪಿ
ಗಮನಾರ್ಹವೆಂದರೆ, ಇದೇ ಆರೋಪಿ ಈ ಹಿಂದೆ ನರೇಗಲ್ ಪೊಲೀಸ್ ಠಾಣೆಯ ಗುನ್ನೆ ನಂ.55/2026ರ ಪ್ರಕರಣದಲ್ಲೂ ಆರೋಪಿಯಾಗಿದ್ದ. ಆ ಪ್ರಕರಣದಲ್ಲಿ ಆತನಿಂದ 331 ಗ್ರಾಂ ಗಾಂಜಾ, ಅಂದಾಜು ₹33,100 ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಮತ್ತೊಮ್ಮೆ ಗಾಂಜಾ ಸಂಗ್ರಹ ಪ್ರಕರಣದಲ್ಲಿ ಇದೇ ವ್ಯಕ್ತಿ ಸಿಕ್ಕಿಬಿದ್ದಿರುವುದು ನರೇಗಲ್ ಭಾಗದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಟ ಮತ್ತು ಮಾರಾಟದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿರುವುದನ್ನು ತೋರಿಸಿದೆ.