ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗೆ ರಾಜ್ಯ ಸರ್ಕಾರದ ವತಿಯಿಂದ ಅಧಿಕೃತ ಆಹ್ವಾನ ನೀಡಲಾಯಿತು.

ಅಕ್ಟೋಬರ್ 11ರಂದು ನಡೆಯಲಿರುವ ಮೈಸೂರು ದಸರಾ ಮಹೋತ್ಸವವನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಲಿದ್ದು, ದಸರಾ ಅಂಗವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲೂ ಭಾಗವಹಿಸುವಂತೆ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಆಹ್ವಾನಿಸಿದರು.

ನಗರದ ಗವಿಮಠಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗವಿಶ್ರೀಗಳನ್ನು ಭೇಟಿಯಾಗಿ ಅಧಿಕೃತವಾಗಿ ಆಹ್ವಾನ ಪತ್ರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, “ಅತ್ಯಂತ ವೈಭವದಿಂದ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದಸರಾ ಉದ್ಘಾಟನೆಗೆ ಗವಿಶ್ರೀಗಳು ಒಪ್ಪಿಕೊಂಡಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಈ ಮೂಲಕ ನಮ್ಮ ಭಾಗಕ್ಕೂ ವಿಶೇಷ ಹಿರಿಮೆ ದೊರೆತಂತಾಗಿದೆ” ಎಂದು ಹೇಳಿದರು.

ಸರ್ಕಾರದ ಆಹ್ವಾನವನ್ನು ಸ್ವೀಕರಿಸಿದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದರು.

ಕೊಪ್ಪಳ ಗವಿಮಠದ ಶ್ರೀಗಳು ಮೈಸೂರು ದಸರಾ ಉದ್ಘಾಟಿಸಲಿರುವುದು ಜಿಲ್ಲೆಯ ಜನರಲ್ಲಿ ಸಂತಸ ಹಾಗೂ ಹೆಮ್ಮೆಯ ಭಾವನೆ ಮೂಡಿಸಿದೆ.