ಹಾವೇರಿ: ಸಾರ್ವಜನಿಕ ಜೀವನದಲ್ಲಿ ಅಧಿಕಾರ ಮತ್ತು ಪ್ರಶಸ್ತಿಗಳ ಹಿಂದೆ ಓಡುವವರ ಮಧ್ಯೆ, ತಮಗೆ ಒಲಿದು ಬಂದ ಅತ್ಯುನ್ನತ ‘ಗೌರವ ಡಾಕ್ಟರೇಟ್’ ಅನ್ನು ವಿನಮ್ರವಾಗಿ ನಿರಾಕರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಗಮನ ಸೆಳೆದಿದ್ದಾರೆ.

ಹಾವೇರಿ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆದ ತನ್ನ ಸಿಂಡಿಕೇಟ್ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿತ್ತು. ಆದರೆ, ಈ ಗೌರವವನ್ನು ಸ್ವೀಕರಿಸಲು ತಾವು ಅಸಮರ್ಥರೆಂದು ತಿಳಿಸಿರುವ ಬೊಮ್ಮಾಯಿ, ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ.

ಬೊಮ್ಮಾಯಿ ಅವರ ಪತ್ರದ ಪ್ರಮುಖ ಅಂಶಗಳು: ತಮಗೆ ಗೌರವ ನೀಡಲು ನಿರ್ಧರಿಸಿದ ಕುಲಪತಿಗಳು, ಉಪಕುಲಪತಿಗಳು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಬೊಮ್ಮಾಯಿ ಅವರು ಹೃತ್ಪೂರ್ವಕ ಧನ್ಯವಾದಗಳು. ನಾನು ಸಾರ್ವಜನಿಕ ಸೇವೆಯಲ್ಲಿದ್ದೇನೆ. ಈ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಸಿಗುವ ದೊಡ್ಡ ಗೌರವ ಎಂದು ಅವರು ತಿಳಿಸಿದ್ದಾರೆ.

ದೀರ್ಘಕಾಲದವರೆಗೆ ನಿರ್ದಿಷ್ಟ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದವರಿಗೆ ಇಂತಹ ಗೌರವಗಳು ಸಲ್ಲಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಿತ ಸಮಾಜ ಸೇವಕರಿಗೆ ಇದನ್ನು ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಪುನರ್ ಪರಿಶೀಲನೆಗೆ ಮನವಿ:
ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಬೊಮ್ಮಾಯಿ ಅವರು, ಈ ಗೌರವ ಡಾಕ್ಟರೇಟ್ ಅನ್ನು ಯಾವುದಾದರೂ ವಿಶಿಷ್ಟ ಸಾಧಕರಿಗೆ ನೀಡುವಂತೆ ವಿಶ್ವವಿದ್ಯಾಲಯಕ್ಕೆ ವಿನಂತಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಅಥವಾ ಸಾರ್ವಜನಿಕ ಜೀವನದಲ್ಲಿದ್ದಾಗ ಇಂತಹ ಪ್ರಶಸ್ತಿಗಳಿಂದ ದೂರವಿರುವ ಬೊಮ್ಮಾಯಿ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.