ಗದಗ: ರಾಜ್ಯದಲ್ಲಿ ಮುಂಗಾರು ಹಂಗಾಮಿನ ತೀವ್ರ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಹೊಸದಾಗಿ 40 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಪೈಕಿ ಗದಗ ಜಿಲ್ಲೆಯ ಮೂರು ಪ್ರಮುಖ ತಾಲೂಕುಗಳು ತೀವ್ರ ಬರಪೀಡಿತ ಪ್ರದೇಶಗಳೆಂದು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಸರ್ಕಾರದ ಅಧಿಸೂಚನೆಯ ಅನುಬಂಧದ ಪ್ರಕಾರ (ಸರ್ಕಾರಿ ಆದೇಶ ಸಂಖ್ಯೆ: ಆಇ 586 ಟಿಎನ್‌ಆರ್ 2026), ಗದಗ ಜಿಲ್ಲೆಯ ಕೆಳಗಿನ ಮೂರು ತಾಲೂಕುಗಳನ್ನು ‘ತೀವ್ರ ಬರ’ (Severe Drought) ಪೀಡಿತ ತಾಲೂಕುಗಳೆಂದು ವರ್ಗೀಕರಿಸಲಾಗಿದೆ:
- ಗದಗ (Gadag)
- ಮುಂಡರಗಿ (Mundargi)
- ರೊಣ (Ron)
ಬರ ನಿರ್ವಹಣೆ ಮತ್ತು ಮುಂದಿನ ಕ್ರಮಗಳು:
- ಜೂನ್ 1 ರಿಂದ ಸೆಪ್ಟೆಂಬರ್ 23 ರವರೆಗಿನ ಮಳೆಯ ಕೊರತೆ ಹಾಗೂ ಇತರೆ ವೈಜ್ಞಾನಿಕ ಮಾನದಂಡಗಳನ್ನು (ಕರ್ನಾಟಕ ಸರ್ಕಾರದ ಬರ ನಿರ್ವಹಣಾ ಕೈಪಿಡಿ-2020ರ ಪ್ರಕಾರ) ಆಧರಿಸಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕಪ ವೀಕ್ಷಣಾ ಕೇಂದ್ರವು (KSNDMC) ನಡೆಸಿದ ಸಮೀಕ್ಷೆ ಮತ್ತು ತಳಮಟ್ಟದ ಪರಿಶೀಲನೆ (Ground Truthing) ವರದಿಯ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ.
- ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆರು ತಿಂಗಳವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ.
- ಬರಪೀಡಿತವೆಂದು ಘೋಷಿಸಲಾದ ಈ ತಾಲೂಕುಗಳಲ್ಲಿ ಜಿಲ್ಲಾ ದುರಂತ ನಿರ್ವಹಣಾ ಪ್ರಾಧಿಕಾರದ ವತಿಯಿಂದ ಅಗತ್ಯ ಪರಿಹಾರ ಕಾರ್ಯಗಳು ಹಾಗೂ ಎಸ್‌ಡಿಆರ್‌ಎಫ್ (SDRF) ಮಾನದಂಡಗಳ ಅನ್ವಯ ರೈತರಿಗೆ ಮತ್ತು ಜನಸಾಮಾನ್ಯರಿಗೆ ಪರಿಹಾರ ಒದಗಿಸುವ ಪ್ರಕ್ರಿಯೆ ಚುರುಕುಗೊಳ್ಳಲಿದೆ.
- ಕೂಡಲೇ ಬೆಳೆ ಹಾನಿಯ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ನಿರ್ದೇಶನ ನೀಡಲಾಗಿದೆ.