ಗದಗ: ಅನುದಾನ ಕೊರತೆ, ಕಾಮಗಾರಿಗಳ ಬಾಕಿ ಹಣ ಪಾವತಿ ಹಾಗೂ ಗುತ್ತಿಗೆದಾರರ ಒತ್ತಡದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಕೆಆರ್‌ಐಡಿಎಲ್‌ ಎಇಇ ಪರ್ವೀಜ್ ಧಾರವಾಡ, ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂದಿದೆ.

ಭೂಪಾಲ್ ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಪರ್ವೀಜ್ ಅವರ ಚಲನವಲನ ದಾಖಲಾಗಿದ್ದು, ಇದನ್ನು ಆಧರಿಸಿ ಪೊಲೀಸರು ಮುಂದಿನ ಹಂತದ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಸೆ.13ರಂದು ಗದಗದಿಂದ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ್ದ ಪರ್ವೀಜ್, ಸೆ.14ರಂದು ಬೆಂಗಳೂರಿಗೆ ತಲುಪಿರುವುದು ಖಚಿತವಾಗಿತ್ತು. ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಅವರು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ರೈಲು ಮಾರ್ಗಗಳು, ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿವಿಧ ಸ್ಥಳಗಳಲ್ಲಿನ ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಪರ್ವೀಜ್ ಅವರ ಪತ್ತೆಗಾಗಿ ಗದಗ ಪೊಲೀಸರು ಈಗಾಗಲೇ ಐದು ವಿಶೇಷ ತಂಡಗಳನ್ನು ರಚಿಸಿದ್ದು, ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಶೋಧ ನಡೆಸುತ್ತಿದ್ದಾರೆ. ಮೊಬೈಲ್‌ ಕರೆ ವಿವರ (ಸಿಡಿಆರ್), ಸಿಸಿಟಿವಿ ದೃಶ್ಯಗಳು, ರೈಲು ಪ್ರಯಾಣದ ಮಾಹಿತಿಗಳನ್ನು ಆಧರಿಸಿ ಪೊಲೀಸರು ಅವರ ಚಲನವಲನದ ಜಾಡು ಹಿಡಿಯಲು ಮುಂದಾಗಿದ್ದಾರೆ.

ಭೋಪಾಲ್ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಪರ್ವೀಜ್ ಕಾಣಿಸಿಕೊಂಡಿರುವ ಮಾಹಿತಿ ಪೊಲೀಸರ ಶೋಧ ಕಾರ್ಯಾಚರಣೆಗೆ ಹೊಸ ದಿಕ್ಕು ನೀಡಿದೆ. ಅವರು ಭೋಪಾಲ್‌ನಿಂದ ಯಾವ ಮಾರ್ಗವಾಗಿ ತೆರಳಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಪರ್ವೀಜ್ ಅವರ ಸುರಕ್ಷಿತ ಪತ್ತೆಯೇ ಸದ್ಯ ಪೊಲೀಸರ ಪ್ರಮುಖ ಗುರಿಯಾಗಿದ್ದು, ಭೋಪಾಲ್ ಸುಳಿವಿನ ಬೆನ್ನಲ್ಲೇ ಶೋಧ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ.