ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ತೆರೆಬಿದ್ದಿದ್ದು, 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 9ರಂದು ಗುರುವಾರ ಮಧ್ಯಾಹ್ನ 3:00 ಗಂಟೆಗೆ ಪ್ರಕಟವಾಗಲಿದೆ.
ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಅಧಿಕೃತ ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಥಿಗಳು ಮಂಡಲಿಯ ಅಧಿಕೃತ ವೆಬ್‌ಸೈಟ್ https://karresults.nic.in ಮೂಲಕ ಅಥವಾ ‘ಕರ್ನಾಟಕ ಒನ್’ ಮೊಬೈಲ್ ಆಪ್ ಬಳಸಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಇದಲ್ಲದೆ, ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಂಡಳಿಯ ವತಿಯಿಂದ ನೇರವಾಗಿ ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕವೂ ಫಲಿತಾಂಶದ ವಿವರಗಳನ್ನು ರವಾನಿಸಲಾಗುತ್ತದೆ.
ಈ ಸಾಲಿನ ವಿಶೇಷವೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಡಿಜಿಟಲ್ ಅಂಕಪಟ್ಟಿಗಳನ್ನು ‘ಡಿಜಿಲಾಕರ್’ (DigiLocker) ಮೂಲಕ ಲಭ್ಯಗೊಳಿಸಲಾಗುತ್ತಿದೆ. ಫಲಿತಾಂಶ ಪ್ರಕಟವಾಗುವ ಅದೇ ದಿನ ಮಧ್ಯಾಹ್ನ 3:00 ಗಂಟೆಗೆ ವಿದ್ಯಾರ್ಥಿಗಳು https://www.digilocker.gov.in ಜಾಲತಾಣದಿಂದ ತಮ್ಮ ಅಂಕಪಟ್ಟಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಂಕಪಟ್ಟಿ ಡೌನ್‌ಲೋಡ್ ಮಾಡುವ ವಿಧಾನವನ್ನು ವಿವರಿಸುವ ವಿಡಿಯೋ ಲಿಂಕ್ ಅನ್ನು ಸಹ ಮಂಡಲಿ ಹಂಚಿಕೊಂಡಿದೆ.
ಏಪ್ರಿಲ್ 9ರ ಮಧ್ಯಾಹ್ನ 3:00 ಗಂಟೆಗೆ ಆಯಾ ಕಾಲೇಜುಗಳಲ್ಲೂ ಫಲಿತಾಂಶದ ಪಟ್ಟಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಕಾಲೇಜುಗಳ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ. ಈ ಹೊಸ ತಾಂತ್ರಿಕ ಸೌಲಭ್ಯಗಳಿಂದಾಗಿ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯಲು ಕಾಯುವುದು ತಪ್ಪಲಿದೆ ಎಂದು ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.