ಕೊಪ್ಪಳ: ನಾಡಿನ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ-2026ರ ಉದ್ಘಾಟನೆಗೆ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದು, ಗವಿಶ್ರೀಗಳಿಗೆ ವಿಶೇಷ ಗೌರವ ನೀಡಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ.
ಇದರೊಂದಿಗೆ ಕೊಪ್ಪಳ ಗವಿಮಠದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪೀಠಾಧಿಪತಿಯೊಬ್ಬರು ಮೈಸೂರು ದಸರಾ ಉದ್ಘಾಟಿಸುವ ಅಪೂರ್ವ ಸಂದರ್ಭ ಒದಗಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಅಧಿಕೃತ ಘೋಷಣೆ
ಮೈಸೂರು ದಸರಾ ಉದ್ಘಾಟಕರಾಗಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ಹೆಸರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಅಧಿಕೃತ ಘೋಷಣೆಗೂ ಮುನ್ನ ಮುಖ್ಯಮಂತ್ರಿ ಅವರು ಗವಿಶ್ರೀಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮೈಸೂರು ದಸರಾ ಉದ್ಘಾಟನೆಗೆ ಆಗಮಿಸುವಂತೆ ಮನವಿ ಮಾಡಿದ್ದರು. ಆರಂಭದಲ್ಲಿ ಗವಿಶ್ರೀಗಳು ಒಪ್ಪಿಗೆ ನೀಡಿರಲಿಲ್ಲ. ಕೆಲಹೊತ್ತು ಚರ್ಚೆ ನಡೆಸಿದ ಬಳಿಕ ದಸರಾ ಉದ್ಘಾಟನೆಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕವೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.
ಗವಿಮಠದ ಇತಿಹಾಸದಲ್ಲಿ ಹೊಸ ಅಧ್ಯಾಯ
ಕೊಪ್ಪಳದ ಶ್ರೀ ಗವಿಮಠಕ್ಕೆ ಇದುವರೆಗೆ 17 ಮಂದಿ ಪೀಠಾಧಿಪತಿಗಳಾಗಿದ್ದಾರೆ. ಇದೀಗ 18ನೇ ಪೀಠಾಧಿಪತಿಗಳಾಗಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಮೈಸೂರು ಮಹಾದಸರಾ ಉದ್ಘಾಟಿಸುವ ಮೂಲಕ ಗವಿಮಠದ ಪರಂಪರೆಯಲ್ಲಿ ಹೊಸ ಇತಿಹಾಸ ನಿರ್ಮಿಸುವ ಸಂದರ್ಭ ಎದುರಾಗಿದೆ.
1977ರ ಜೂನ್ 1ರಂದು ಜನಿಸಿದ ಗವಿಶ್ರೀಗಳು, 2002ರ ಡಿಸೆಂಬರ್ 13ರಂದು ಕೊಪ್ಪಳದ ಶ್ರೀ ಗವಿಮಠದ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾದರು. ಬಳಿಕ ಅವರಿಗೆ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.
ಸದ್ಯ ಮೌನಾನುಷ್ಠಾನದಲ್ಲಿ ಗವಿಶ್ರೀ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಸರಾ ಉದ್ಘಾಟಕರಾಗಿ ಗವಿಶ್ರೀಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದರೂ, ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಈ ಕುರಿತು ಗುರುವಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸದ್ಯ ಗವಿಶ್ರೀಗಳು ಮೌನಾನುಷ್ಠಾನದಲ್ಲಿದ್ದು, ಸೋಮವಾರ ಈ ಕುರಿತು ಅಧಿಕೃತವಾಗಿ ಮಾತನಾಡುವ ನಿರೀಕ್ಷೆಯಿದೆ. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಗವಿಮಠಕ್ಕೆ ಭೇಟಿ ನೀಡಿ ಅಧಿಕೃತ ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಗವಿಶ್ರೀ
ಕೊಪ್ಪಳ ಎಂದರೆ ಶ್ರೀ ಗವಿಮಠ ನೆನಪಾಗುವಷ್ಟು ಗವಿಮಠದ ಕೀರ್ತಿಯನ್ನು ನಾಡಿನಾದ್ಯಂತ ವಿಸ್ತರಿಸಿದ ಕೀರ್ತಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳಿಗೆ ಸಲ್ಲುತ್ತದೆ.
ಆಧ್ಯಾತ್ಮಿಕತೆಯನ್ನು ಸಮಾಜಮುಖಿ ಸೇವೆಯೊಂದಿಗೆ ಜೋಡಿಸಿರುವ ಗವಿಶ್ರೀಗಳು ಅನ್ನ ದಾಸೋಹ, ಅಕ್ಷರ ದಾಸೋಹ ಹಾಗೂ ಜ್ಞಾನ ದಾಸೋಹದ ಜತೆಗೆ ಜಲ ದೀಕ್ಷೆ ಮತ್ತು ವೃಕ್ಷ ದಾಸೋಹದಂತಹ ಸಾಮಾಜಿಕ ಅಭಿಯಾನಗಳಿಗೆ ಉತ್ತೇಜನ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯ ಹಾಗರಗುಂಡಿಯಲ್ಲಿ ಜನಿಸಿದ ಗವಿಶ್ರೀಗಳ ಪೂರ್ವಾಶ್ರಮದ ಹೆಸರು ಪರುತಯ್ಯ. ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಹೇರಿ ಗ್ರಾಮದವರು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್, ತತ್ವಶಾಸ್ತ್ರ, ಸಂಸ್ಕೃತ ಹಾಗೂ ಕನ್ನಡ ವಿಷಯಗಳಲ್ಲಿ ಸ್ನಾತಕ ಪದವಿ ಪಡೆದು ವಿಶ್ವವಿದ್ಯಾಲಯಕ್ಕೆ 6ನೇ ರ‍್ಯಾಂಕ್ ಗಳಿಸಿದ್ದರು.
ಉನ್ನತ ಶಿಕ್ಷಣದ ಜತೆಗೆ ಗವಿಮಠದ 17ನೇ ಪೀಠಾಧಿಪತಿಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾದ ಅವರು, ಬಳಿಕ ‘ಪರುತದೇವರು’ ಎಂದು ನಾಮಕರಣಗೊಂಡರು. 2002ರ ಡಿಸೆಂಬರ್ 13ರಂದು ಗವಿಮಠದ 18ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾದರು.
ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೌಲಭ್ಯ
ಗವಿಶ್ರೀಗಳು ಅಧಿಕಾರ ಸ್ವೀಕರಿಸಿದ ಬಳಿಕ ಗವಿಮಠದ ಶಿಕ್ಷಣ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ತ್ರಿವಿಧ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.
ಇತ್ತೀಚೆಗೆ ಸುಮಾರು 5,000 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೃಹತ್ ವಸತಿ ಹಾಗೂ ಶೈಕ್ಷಣಿಕ ಕಟ್ಟಡ ನಿರ್ಮಿಸಲಾಗಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ.
ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಲಾಗಿದ್ದು, ಡಿ.ಎಡ್, ಬಿ.ಎಡ್, ಬಿಬಿಎಂ ಹಾಗೂ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಕಾರ್ಯ ನಡೆಯುತ್ತಿದೆ.
ಗವಿಮಠದ ಜಾತ್ರೆಗೂ ಹೊಸ ರೂಪ
ಪ್ರತಿವರ್ಷ ನಡೆಯುವ ಐತಿಹಾಸಿಕ ಕೊಪ್ಪಳ ಗವಿಮಠದ ಜಾತ್ರೆಯನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ವಿವಿಧ ಸಾಮಾಜಿಕ ಅಭಿಯಾನಗಳ ವೇದಿಕೆಯನ್ನಾಗಿ ರೂಪಿಸಿರುವುದು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.
ಇದೀಗ ಮೈಸೂರು ದಸರಾ ಉದ್ಘಾಟನೆಗೆ ಗವಿಶ್ರೀಗಳನ್ನು ಆಹ್ವಾನಿಸಿರುವುದು ಕೊಪ್ಪಳ ಗವಿಮಠದ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸೇವೆಗೆ ಮತ್ತೊಂದು ಗೌರವ ದೊರೆತಂತಾಗಿದೆ.