ಬೆಂಗಳೂರು, ಸೆ.22: ಬರಪೀಡಿತ ತಾಲೂಕುಗಳ ಪಟ್ಟಿಗೆ ಗದಗ ಜಿಲ್ಲೆಯ ತಾಲೂಕುಗಳನ್ನು ಸೇರಿಸುವಂತೆ ತೀವ್ರ ಒತ್ತಡ ಕೇಳಿಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗದಗ, ರೋಣ ಹಾಗೂ ಮುಂಡರಗಿ ಸೇರಿದಂತೆ ರಾಜ್ಯದ 11 ತಾಲೂಕುಗಳಲ್ಲಿ ನೆಲಮಟ್ಟದ ಪರಿಶೀಲನೆ (Ground Truthing) ನಡೆಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.
ಇದರಿಂದ ಗದಗ ಜಿಲ್ಲೆಯ ರೈತರು ಹಾಗೂ ಜನಪ್ರತಿನಿಧಿಗಳ ಹಲವು ದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.
ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದೇ ವೇಳೆ ಗದಗ ತಾಲೂಕನ್ನು ಬರಪಟ್ಟಿಗೆ ಸೇರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಶಾಸಕ ಎಚ್.ಕೆ. ಪಾಟೀಲ ಹೇಳಿದ್ದರೆಂದು ವರದಿಯಾಗಿದೆ.
11 ತಾಲೂಕುಗಳಿಗೆ ಜಿ.ಟಿ. ಪರಿಶೀಲನೆ
ಸೆಪ್ಟೆಂಬರ್ 22ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಜೂನ್ 1ರಿಂದ ಸೆಪ್ಟೆಂಬರ್ 21ರವರೆಗಿನ ಮಳೆಯ ಪ್ರಮಾಣ, ಬೆಳೆ ಪರಿಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಸೂಚಕಗಳ ಆಧಾರದ ಮೇಲೆ 7 ಜಿಲ್ಲೆಗಳ 11 ತಾಲೂಕುಗಳು ನೆಲಮಟ್ಟದ ಪರಿಶೀಲನೆಗೆ ಅರ್ಹತೆ ಪಡೆದಿವೆ.
ಅವುಗಳ ಪೈಕಿ:
- ಗದಗ – ಗದಗ, ಮುಂಡರಗಿ, ರೋಣ
- ಹಾವೇರಿ – ಹಿರೇಕೆರೂರು
- ದಾವಣಗೆರೆ – ಜಗಳೂರು
- ಮೈಸೂರು – ಪಿರಿಯಾಪಟ್ಟಣ
- ಕೊಪ್ಪಳ – ಕುಷ್ಟಗಿ
- ವಿಜಯಪುರ – ತಾಳಿಕೋಟೆ
- ಬೆಂಗಳೂರು ದಕ್ಷಿಣ – ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ
ಇವುಗಳಲ್ಲಿ ಗದಗ, ಮುಂಡರಗಿ ಹಾಗೂ ರೋಣ ತಾಲೂಕುಗಳನ್ನು ಅಧಿಸೂಚನೆಯಲ್ಲಿ ‘ಮಧ್ಯಮ ಬರ’ ವರ್ಗಕ್ಕೆ ಅರ್ಹತೆ ಪಡೆದ ತಾಲೂಕುಗಳು ಎಂದು ನಮೂದಿಸಲಾಗಿದೆ.
ಪಾಟೀಲರ ಒತ್ತಡಕ್ಕೆ ಫಲವೇ?
ಗದಗ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪಟ್ಟಿಗೆ ಸೇರಿಸುವಂತೆ ರಾಜಕೀಯ ಒತ್ತಡ ಹೆಚ್ಚಾಗಿದ್ದ ಸಂದರ್ಭದಲ್ಲೇ ಈ ಅಧಿಸೂಚನೆ ಹೊರಬಿದ್ದಿರುವುದು ಗಮನಾರ್ಹವಾಗಿದೆ.
ಹೀಗಾಗಿ, ಎಚ್.ಕೆ. ಪಾಟೀಲರ ಒತ್ತಡಕ್ಕೆ ಸರ್ಕಾರ ಮಣಿಯಿತೇ?” ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಅಧಿಸೂಚನೆಯಲ್ಲಿ ಈ ಕ್ರಮವನ್ನು ಯಾವುದೇ ವ್ಯಕ್ತಿಯ ಒತ್ತಡದ ಫಲ ಎಂದು ಸರ್ಕಾರ ಹೇಳಿಲ್ಲ. ವೈಜ್ಞಾನಿಕ ಬರ ಮೌಲ್ಯಮಾಪನ ಹಾಗೂ ಬರ ನಿರ್ವಹಣಾ ಕೈಪಿಡಿಯ ಮಾನದಂಡಗಳ ಆಧಾರದ ಮೇಲೆ ತಾಲೂಕುಗಳು ಜಿ.ಟಿ.ಗೆ ಅರ್ಹತೆ ಪಡೆದಿವೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಜಿ.ಟಿ. ಬಳಿಕವೇ ಅಂತಿಮ ನಿರ್ಧಾರ
ನೆಲಮಟ್ಟದ ಪರಿಶೀಲನೆಯಲ್ಲಿ ಬೆಳೆ ಹಾನಿ ಶೇ.33 ಅಥವಾ ಅದಕ್ಕಿಂತ ಹೆಚ್ಚಿದ್ದರೆ ತಾಲೂಕು ಬರ ಘೋಷಣೆಗೆ ಅರ್ಹವಾಗಲಿದೆ. ಬೆಳೆ ಹಾನಿ ಶೇ.50ಕ್ಕಿಂತ ಹೆಚ್ಚಿದ್ದರೆ ‘ತೀವ್ರ ಬರ’ ಎಂದು ವರ್ಗೀಕರಿಸುವ ಅವಕಾಶವಿದೆ.
ಸೆಪ್ಟೆಂಬರ್ 24 ಮತ್ತು 25ರಂದು ಕ್ಷೇತ್ರಮಟ್ಟದ ಪರಿಶೀಲನೆ ನಡೆಯಲಿದ್ದು, ಸೆಪ್ಟೆಂಬರ್ 28ರಂದು ಪರಿಶೀಲನೆ ಪೂರ್ಣಗೊಳಿಸಿ ವರದಿ ಸಲ್ಲಿಸುವ ಗಡುವು ನಿಗದಿಪಡಿಸಲಾಗಿದೆ.
ಹೀಗಾಗಿ ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳ ರೈತರ ದೃಷ್ಟಿಯಲ್ಲಿ ಇದೀಗ ನೆಲಮಟ್ಟದ ಪರಿಶೀಲನೆಯ ವರದಿ ಹಾಗೂ ಅದರ ನಂತರ ಸರ್ಕಾರ ಕೈಗೊಳ್ಳುವ ಅಂತಿಮ ನಿರ್ಧಾರವೇ ನಿರ್ಣಾಯಕವಾಗಲಿದೆ.