ಹೊಸದಿಲ್ಲಿ/ಉಡುಪಿ: ಉಡುಪಿ ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀವಿಶ್ವೇಶತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದ (2031) ಅಂಗವಾಗಿ ಹಮ್ಮಿಕೊಳ್ಳಲಾಗಿರುವ ‘ಜನ್ಮಶತಾಬ್ದ ಪಂಚವಾರ್ಷಿಕ ಯೋಜನೆ’ಯ ಅಧಿಕೃತ ಲಾಂಛನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ನಿವಾಸದಲ್ಲಿ ಬಿಡುಗಡೆಗೊಳಿಸಿದರು.

ಹೊಸದಿಲ್ಲಿಯ ವಸಂತಕುಂಜದ ವೇದವ್ಯಾಸ ಗುರುಕುಲದಲ್ಲಿ ಪ್ರಸ್ತುತ 39ನೇ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ, ಲಾಂಛನ ಅನಾವರಣಗೊಳಿಸಿ ಆಶೀರ್ವದಿಸಿದರು.

ಪ್ರಧಾನಿ ಮೋದಿಗೆ ಯಕ್ಷ ರಾಜಕಿರೀಟ ತೊಡಿಸಿ ಸನ್ಮಾನ ಭೇಟಿಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಯಕ್ಷಗಾನದ ಸಾಂಪ್ರದಾಯಿಕ ರಾಜಕಿರೀಟ ತೊಡಿಸಿ, ಶಾಲು ಹೊದಿಸಿ, ಸ್ವರ್ಣ ಲೇಪಿತ ಕಾಳೀಯ ಮರ್ದನ ಕೃಷ್ಣನ ಪ್ರತಿಮೆ ಹಾಗೂ ಫಲ ಮಂತ್ರಾಕ್ಷತೆ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡ ಪ್ರಧಾನಿಯವರ ಒಳಿತಿಗಾಗಿ ವೇದವ್ಯಾಸ ಗುರುಕುಲದಲ್ಲಿ ಆಯೋಜಿಸಲಾಗಿದ್ದ ಪೂರ್ಣ ನವಗ್ರಹ ಹೋಮ ಹಾಗೂ ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನು ನೀಡಿ ಶ್ರೀಗಳು ಶುಭ ಹಾರೈಸಿದರು.

ಉಡುಪಿ ಮತ್ತು ಪೇಜಾವರ ಮಠ ನಮಗೆ ಸದಾ ಪ್ರೇರಣೆ: ಪ್ರಧಾನಿ ಮೋದಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, “ಪೇಜಾವರ ಹಿರಿಯ ಶ್ರೀಗಳಾದ ವಿಶ್ವೇಶತೀರ್ಥರು, ಪ್ರಸ್ತುತ ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ಮಠವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣಾದಾಯಕ. ಭಾರತೀಯ ಜನತಾ ಪಕ್ಷಕ್ಕೂ ಉಡುಪಿಯ ನಂಟು ಮತ್ತು ಕೊಡುಗೆ ಯಾವತ್ತೂ ಸ್ಮರಣೀಯ. ಜನ್ಮಶತಾಬ್ದ ಯೋಜನೆಗಳು ದೇಶಕ್ಕೆ ಮತ್ತಷ್ಟು ಬಲ ತುಂಬಲಿ” ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಉಡುಪಿ ಹಾಗೂ ದ್ವಾರಕೆಗೆ ಇರುವ ಗಾಢ ಆಧ್ಯಾತ್ಮಿಕ ಸಂಬಂಧವನ್ನು ಸ್ಮರಿಸಿದ ಪ್ರಧಾನಿಗಳು, “ಜನ್ಮಶತಾಬ್ದ ಪಂಚವಾರ್ಷಿಕ ಯೋಜನೆಯಡಿ ದ್ವಾರಕೆಯನ್ನು ಒಳಗೊಂಡಂತೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ” ಎಂದು ಸಲಹೆ ನೀಡಿದರು.

ಕಟ್ಟಕಡೆಯ ವ್ಯಕ್ತಿಗೂ ತಲುಪಿದ ಮಂತ್ರೋಪದೇಶ: ಪೇಜಾವರ ಶ್ರೀಗಳು “ದೆಹಲಿಯ ಚಾತುರ್ಮಾಸ್ಯದ ಅವಧಿಯಲ್ಲಿ ಧರ್ಮ ಮತ್ತು ದೇಶದ ಒಳಿತಿಗಾಗಿ ಧಾರ್ಮಿಕ ವಿಧಿ-ವಿಧಾನಗಳ ಜತೆಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಮಂತ್ರೋಪದೇಶ ನೀಡಿರುವುದು ತೃಪ್ತಿ ತಂದಿದೆ. ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ಅವರು ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಅವರ ಕೈಗಳಿಂದ ಗುರುಗಳ ಜನ್ಮಶತಾಬ್ದ ಯೋಜನೆಯ ಲಾಂಛನ ಅನಾವರಣಗೊಂಡಿರುವುದು ಅತ್ಯಂತ ಅರ್ಥಪೂರ್ಣ” ಎಂದು ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದರು.

ಗಣ್ಯರ ಉಪಸ್ಥಿತಿ ಈ ಸಂದರ್ಭದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್ (ಚೆನ್ನೈ), ಉಡುಪಿ ಹೋಮ್ಸ್ ಮಾಲೀಕ ಪಿ. ರಾಮ್‌ಪ್ರಸಾದ್, ಎಂಆರ್‌ಜಿ ಗ್ರೂಪ್ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ, ಉದ್ಯಮಿ ರವಿ ಶ್ಯಾಮ್ (ಕೊಯಮತ್ತೂರು), ನವದೆಹಲಿ ಕೇಂದ್ರೀಯ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಉದ್ಯಮಿ ಹರೀಶ್ ರಾಯಸ್ (ಬೆಂಗಳೂರು), ಮೈಸೂರು ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹೆಚ್. ವಾಸುದೇವ ಭಟ್, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್ ಮೈಸೂರು, ಟಿ. ಪಿ. ಅನಂತ್ ಬೆಂಗಳೂರು, ವೇದವ್ಯಾಸ ಗುರುಕುಲದ ಪ್ರಾಚಾರ್ಯ ಡಾ. ವಿಠೋಬಾಚಾರ್ಯ ಹಾಗೂ ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

ಈ ವಿಶೇಷ ಲಾಂಛನವನ್ನು ಪೇಜಾವರ ಮಠದ ಪಿಆರ್‌ಒ ವಾಸುದೇವ ಭಟ್ ಪೆರಂಪಳ್ಳಿ ಅವರ ಮಾರ್ಗದರ್ಶನದಲ್ಲಿ ಉಡುಪಿಯ ನಿಧಿ ಗ್ರಾಫಿ ಟೆಕ್ ಸಂಸ್ಥೆಯ ಮುರಳಿಕೃಷ್ಣ ರಾವ್ ವಿನ್ಯಾಸಗೊಳಿಸಿದ್ದಾರೆ.