ಬೆಂಗಳೂರು: ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಅನಧಿಕೃತ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ವಿರುದ್ಧ ರಾಜ್ಯ ಸರ್ಕಾರ ತೀವ್ರ ನಿಗಾ ವಹಿಸಿದ್ದು, ಕಠಿಣ ಕ್ರಮಗಳಿಗೆ ಮುಂದಾಗಿದೆ.
ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಅನ್ವಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸ್ಪಷ್ಟ ಸುತ್ತೋಲೆ ಹೊರಡಿಸಿದೆ.
ಸಾರ್ವಜನಿಕ ಸ್ವತ್ತುಗಳು, ಸರ್ಕಾರಿ ಭೂಮಿ, ಕೆರೆ, ಕುಂಟೆ ಹಾಗೂ ಚರಂಡಿ-ಕಾಲುವೆಗಳ ಜಾಗದಲ್ಲಿ ಅಕ್ರಮವಾಗಿ ತಲೆಎತ್ತಿರುವ ಕಟ್ಟಡಗಳನ್ನು ಕಾನೂನು ಪ್ರಕಾರ ನೆಲಸಮಗೊಳಿಸಲು ಮತ್ತು ನಿಯಮಬಾಹಿರ ನಿರ್ಮಾಣ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಲು ಸೂಚಿಸಲಾಗಿದೆ.
ಸುತ್ತೋಲೆಯಲ್ಲಿನ ಪ್ರಮುಖ ನಿಯಮಗಳು ಮತ್ತು ನಿರ್ದೇಶನಗಳು:
- ಅನುಮೋದಿತ ನಕ್ಷೆ ಪ್ರದರ್ಶನ ಕಡ್ಡಾಯ: ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆದು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಸ್ಥಳದಲ್ಲಿ ಅಂತಿಮ ಹಂತದವರೆಗೆ ಅನುಮೋದಿತ ನಕ್ಷೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು.
- ಸ್ಥಳ ಪರಿಶೀಲನೆ ಹಾಗೂ ನೋಟಿಸ್: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ನಿರಂತರವಾಗಿ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ತಕ್ಷಣ ಲಿಖಿತ ನೋಟಿಸ್ ನೀಡಿ ಕ್ರಮ ಜರುಗಿಸಬೇಕು.
- ಸಂಪರ್ಕಗಳಿಗೆ ‘ವಾಸ ಯೋಗ್ಯ ಪ್ರಮಾಣಪತ್ರ’ ಅನಿವಾರ್ಯ: ಕಾಮಗಾರಿ ಪೂರ್ಣಗೊಂಡ ನಂತರ ಸಮಗ್ರ ಪರಿಶೀಲನೆ ನಡೆಸಿ ನೀಡಲಾಗುವ ಪೂರ್ಣಗೊಂಡ ಪತ್ರ (Completion Certificate) ಹಾಗೂ ವಾಸಯೋಗ್ಯ ಪ್ರಮಾಣಪತ್ರ (Occupancy Certificate) ಇಲ್ಲದೆ ಕಟ್ಟಡಗಳಿಗೆ ವಿದ್ಯುತ್, ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕಗಳನ್ನು ಕಲ್ಪಿಸುವಂತಿಲ್ಲ.
- ವಾಣಿಜ್ಯ ಪರವಾನಗಿ ನಿರಾಕರಣೆ: ಅನಧಿಕೃತವಾಗಿ ಅಥವಾ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿಗೆ ಯಾವುದೇ ರೀತಿಯ ವ್ಯಾಪಾರ, ವಾಣಿಜ್ಯ ವಹಿವಾಟು ನಡೆಸಲು ಟ್ರೇಡ್ ಲೈಸೆನ್ಸ್ / ಪರವಾನಗಿ ನೀಡಬಾರದು.
- ಬ್ಯಾಂಕ್ ಸಾಲಕ್ಕೆ ಕಠಿಣ ನಿಯಮ: ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕಟ್ಟಡಗಳಿಗೆ ಸಾಲ ಮಂಜೂರು ಮಾಡುವ ಮುನ್ನ, ಆ ಕಟ್ಟಡಕ್ಕೆ ನಿಯಮಾನುಸಾರ ಪೂರ್ಣಗೊಂಡ ಪ್ರಮಾಣಪತ್ರ ಮತ್ತು ವಾಸಯೋಗ್ಯ ಪ್ರಮಾಣಪತ್ರ ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಉಲ್ಲಂಘಕರು ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ: ಪೂರ್ಣಗೊಂಡ ಪ್ರಮಾಣಪತ್ರ ನೀಡಿದ ನಂತರವೂ ನಕ್ಷೆ ಉಲ್ಲಂಘಿಸಿರುವುದು ಕಂಡುಬಂದರೆ, ಕಟ್ಟಡ ಮಾಲೀಕರು, ಸಂಬಂಧಪಟ್ಟ ಎಂಜಿನಿಯರ್/ವಾಸ್ತುಶಿಲ್ಪಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ನಿರ್ಮಾಣ ಕಂಡುಬಂದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೂ ಶಿಸ್ತುಕ್ರಮ ಜರುಗಿಸಲಾಗುತ್ತದೆ.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪ್ರತಿ ತಿಂಗಳು ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಅನಧಿಕೃತ ಕಟ್ಟಡಗಳ ತೆರವು ಮತ್ತು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಗಾ ಇಡಬೇಕೆಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ.