ಕೋಲಾರ/ಬೀದರ್: ರಾಜ್ಯದ ಎರಡು ಪ್ರಮುಖ ಜಿಲ್ಲಾ ಕೇಂದ್ರಗಳಾದ ಕೋಲಾರ ಮತ್ತು ಬೀದರ್ ಜಿಲ್ಲಾಧಿಕಾರಿಗಳ (ಡಿಸಿ) ಕಚೇರಿಗಳಿಗೆ ಇಂದು (ಡಿಸೆಂಬರ್ 12) ಏಕಕಾಲದಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಮೂಲಕ ಬೆದರಿಕೆ ಬಂದಿದ್ದು, ಕೆಲಕಾಲ ಭಾರೀ ಆತಂಕದ ವಾತಾವರಣ ಸೃಷ್ಟಿಸಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬೆದರಿಕೆ ಕರೆಗಳು ‘ಹುಸಿ’ ಎಂದು ದೃಢಪಡಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಕೋಲಾರ ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯ ಇಮೇಲ್‌ಗೆ ಸಂಜೆ 5:33 ರ ಸುಮಾರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಬರುತ್ತಿದ್ದಂತೆ ಜಿಲ್ಲಾಡಳಿತವು ತುರ್ತು ಕ್ರಮ ಕೈಗೊಂಡಿತು. ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತಕ್ಷಣ ಹೊರಗೆ ಕಳುಹಿಸಲಾಯಿತು.
ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಬಾಂಬ್ ನಿಷ್ಕ್ರೀಯ ದಳ (Bomb Disposal Squad), ಮತ್ತು ಡಾಗ್ ಸ್ಕ್ವಾಡ್ (ಶ್ವಾನದಳ) ಧಾವಿಸಿ ಬಂದವು. ಸಂಪೂರ್ಣ ಕಚೇರಿ ಆವರಣ, ಕೊಠಡಿಗಳು ಮತ್ತು ವಾಹನ ನಿಲುಗಡೆ ಸ್ಥಳಗಳನ್ನು ತೀವ್ರವಾಗಿ ಪರಿಶೀಲಿಸಲಾಯಿತು.
ಸುದೀರ್ಘ ಪರಿಶೀಲನೆಯ ನಂತರ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಇದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ದೃಢಪಡಿಸಿದರು.
ಬೀದರ್ ಡಿಸಿ ಕಚೇರಿಗೂ ಬೆದರಿಕೆ
ಕೋಲಾರದಂತೆಯೇ, ಬೀದರ್ ಜಿಲ್ಲಾಧಿಕಾರಿ ಕಚೇರಿಗೂ ಸಹ ಇದೇ ಮಾದರಿಯಲ್ಲಿ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಬೀದರ್‌ನಲ್ಲೂ ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬಾಂಬ್ ನಿಷ್ಕ್ರಿಯ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಇಲ್ಲಿಯೂ ಕೂಡ ತೀವ್ರ ತಪಾಸಣೆ ಬಳಿಕ ಇದು ಸುಳ್ಳು ಬೆದರಿಕೆ ಎಂದು ತಿಳಿದುಬಂದಿದ್ದು, ಸಾರ್ವಜನಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟರು.