ಬೆಂಗಳೂರು: ಚಂದನವನದ ನಿರ್ದೇಶಕ ಎಸ್ ಕೆ ಭಗವಾನ್ ಸೋಮವಾರ ಮುಂಜಾನೆ ಇಹಲೋಕ ತ್ಯಜಿಸಿದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿರುವ ಭಗವಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಎಸ್..ಕೆ. ಭಗವಾನ್(ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್) ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರು. ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧ. ಇವರಿಬ್ಬರೂ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಸದಭಿರುಚಿಯ ಚಿತ್ರಗಳನ್ನು ಮಾಡಿರುವ ಅವರು 24 ಕಾದಂಬರಿ ಪ್ರೇರಿತ ಸಿನೆಮಾಗಳನ್ನು ಮಾಡಿದ್ದಾರೆ. ಇತ್ತೀಚಿಗೆ ಭಗವಾನ್ ಅವರು ’ಆದರ್ಶ ಸಿನೆಮಾ ಇನ್ಸ್ಟಿಟ್ಯೂಟ್‍’ನ ಪ್ರಾಂಶುಪಾಲರಾಗಿದ್ದು, ಸಿನೆಮಾ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದಾರೆ.

ಎಸ್.ಕೆ. ಭಗವಾನ್ ಅವರು 1933 ಜುಲೈ 3 ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಜನಿಸಿದರು. ಹೈಸ್ಕೂಲಿನಲ್ಲಿ ವಿದ್ಯುವಕರಾಗಿದ್ದಾಗ ’ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ನಾಟಕಗಳನ್ನು ಮಾಡುತ್ತಿದ್ದರು. 1956 ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ಸಿನೆಮಾ ಜೀವನ ಆರಂಭಿಸಿದರು.