ಮೈಸೂರು: ಯಾರೇ ಬಂದರೂ ಕೋಲಾರ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ. ಬಾದಾಮಿಯಲ್ಲೂ ನನ್ನನ್ನು ಸೋಲಿಸಲು ಕೇಂದ್ರ ಸಚಿವ ಅಮಿತ್ ಶಾ ಬಂದಿದ್ದರು. ಆಶೋಕ್ ಪಟ್ಟಣಶೆಟ್ಟಿ ಬದಲು ಶ್ರೀರಾಮುಲುರನ್ನು ಕಣಕ್ಕಿಳಿಸಿದರು. ಆದರೂ ಬಿಜೆಪಿಗೆ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಾದಾಮಿ ಕ್ಷೇತ್ರದಲ್ಲಿ 2 ದಿನಗಳ ಕಾಲವಷ್ಟೇ ಪ್ರಚಾರ ಮಾಡಿದ್ದೆ. ದೂರವಾಗುವ ಕಾರಣಕ್ಕೆ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ಕೊಡಿಸುತ್ತೇವೆ ಎಂದಿದ್ದರು. ಎಲ್ಲದಕ್ಕೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಮುಂಬರುವ ಚುನಾವಣೆಯಲ್ಲಿ 130 ಸ್ಥಾನಗಳನ್ನು ಗೆಲ್ಲುತ್ತೇವೆ. ಅದು 150 ಸ್ಥಾನದಲ್ಲಿ ಗೆದ್ದರು ಗೆಲ್ಲಬಹುದು. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಆದ ಕೆಲಸಗಳ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾವು ನೀಡಿದ ಪ್ರಣಾಳಿಕೆಯಲ್ಲಿ ಶೇ 99 ರಷ್ಟು ಭರವಸೆಗಳನ್ನು ಈಡೇರಿಸಿದ್ದೀವಿ.
ಈ ಬಾರಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಹಾಗೂ ಗೃಹಿಣಿಯರಿಗೆ ಮಾಸಿಕ 2000 ರೂ. ಹಣ ನೀಡುವುದಾಗಿ ಘೋಷಿಸಿದ್ದೀವಿ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ ಎಂದರು.