ರಾಯಚೂರು: ಪಕ್ಷ ವಿಸರ್ಜಿಸುವುದಕ್ಕೆ ನಾನು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿಲ್ಲ. ಇದನ್ನು ಕಾಂಗ್ರೆಸ್ ಮಹಾನುಭಾವರು ಅರ್ಥಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ನಿಮ್ಮ ಪರಿಸ್ಥಿತಿ ಏನಾಗಿದೆ ತಿಳಿದುಕೊಳ್ಳಿ. ಇಡೀ ದೇಶದಲ್ಲಿ ಕಾಂಗ್ರೆಸ್ ನಾಪತ್ತೆಯಾಗಿದೆ. ಕರ್ನಾಟಕದಲ್ಲಿ 50,
– 60 ಸೀಟು ಗೆದ್ದಿದ್ದೀರಿ. ಅದು ಕಳೆದುಕೊಳ್ಳುತ್ತೀರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿ ಗೆಲ್ಲುವ ಸೀಟುಗಳನ್ನು ಮುಂದಿನ ಚುನಾವಣೆಯಲ್ಲಿ ಕಳೆದುಕೊಳ್ಳುತ್ತೀರಿ. ರಾಜ್ಯದ ಜನತೆಯ ನಾಡಿ ಮಿಡಿತ ಏನಿದೆ ಎನ್ನುವುದು ಗೊತ್ತಿದೆ. ಪದೇ ಪದೇ ನಮ್ಮನ್ನು ಯಾಕೆ ಕೆಣಕುತ್ತೀರಿ, ಕಷ್ಟ ಪಟ್ಟು ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.
ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ 2 ಸಾವಿರ ಖಚಿತ ಅಂತ ಹೇಳಿಕೊಳ್ಳುತ್ತಿದ್ದೀರಲ್ಲ. ಅದನ್ನಾದರೂ ಹೇಳಿಕೊಂಡು ಹೋಗಿ. ಕುಮಾರಸ್ವಾಮಿ ಭಜನೆ ಮಾಡಿದಷ್ಟು, ಹೆಸರು ಹೇಳಿದಷ್ಟು, ಬರುವ ಸೀಟು ಬರುವುದಿಲ್ಲ. ಆ ಉಚಿತ, ಖಚಿತನಾದರೂ ಹೇಳಿಕೊಂಡು ಹೋಗಿ. ಆಗಲಾದರೂ ನಾಲ್ಕು ಸೀಟು ಹೆಚ್ಚಿಗೆ ಗೆಲ್ಲಬಹುದು ಎಂದು ವ್ಯಂಗ್ಯವಾಡಿದರು.