ಅರಸಿಕೇರೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆ ಹತ್ತಿರವಾಗುತ್ತಿದ್ದಂತೆ ಕಾರ್ಯಕರ್ತರೊಬ್ಬರ ಜೊತೆ ನಡೆಸಿದ ಆಡಿಯೋ ಸಂಭಾಷಣೆ ಜಾಲತಾಣದಲ್ಲಿ ವೈರಲ್ ಆಗಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡಲು ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯ ಅವರ ಪತಿ ವಾಸುಗೆ ಅರಸಿಕೇರೆ ಶಾಸಕ ಶಿವಲಿಂಗೇಗೌಡ ಅವರು 50 ಸಾವಿರ ರೂ. ಹಣ ನೀಡಿದ್ದಾರೆ.
ಆ ವ್ಯಕ್ತಿ ಈಗ ಶಾಸಕರ ವಿರುದ್ಧ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಆ ಕಾರಣಕ್ಕಾಗಿ ಹಣ ಮರಳಿ ನೀಡುವಂತೆ ಶಿವಲಿಂಗೇಗೌಡ ಅವರು ಕರೆ ಮಾಡಿದ್ದಾರೆ.
ಶಾಸಕರು ಕರೆ ಮಾಡಿದ್ದು, ನೀನು ಬೇರೆಯವರ ಪರ ಕೆಲಸ ಮಾಡಲು ಮುಂದಾಗಿರುವುದು ನನಗೆ ಗೊತ್ತಾಗಿದೆ. ಹೀಗಾಗಿ ನಾನು ನೀಡಿದ 50 ಸಾವಿರ ರೂಪಾಯಿಗಳನ್ನು ವಾಪಸ್ ಕೊಡು ಎಂದಿದ್ದಾರೆ.
ಅದಕ್ಕೆ ಆತ, ನೀವಾಗಿಯೇ ಕೊಟ್ಟಿದ್ದೀರಿ. ನಾನೇನು ಹಣ ಕೇಳಿರಲಿಲ್ಲ. ಈಗ ನನ್ನ ಬಳಿ ಹಣ ಇಲ್ಲ ಎಂದು ಹೇಳಿದ್ದಾನೆ. ಈ ಆಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿವಲಿಂಗೇಗೌಡರು ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಅಗಲಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಖಚಿತ ಎನ್ನಲಾಗಿದೆ. ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ ನಡೆಸಿದ್ದು, ಈಗ ಜಾಲತಾಣದಲ್ಲಿ ಆಡಿಯೋ ಒಂದು ವೈರಲ್ ಆಗಿದೆ.