ಬಾಗಲಕೋಟೆ: ಪೇಸಿಎಂ ಅಭಿಯಾನ ಮಾಡುತ್ತಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ನರಿಗಳು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಬೆಂಗಳೂರಿನ ಬೀದಿಗಳಲ್ಲಿ ಸಿದ್ದರಾಮಯ್ಯ ಗಮ್ ಹಚ್ಚುತ್ತಿದ್ದರೆ, ಡಿಕೆಶಿ ಪೋಸ್ಟರ್ ಹಚ್ಚುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಕ್ಷ ಒಂದು ಎಟಿಎಂ ಇದ್ದ ಹಾಗೆ. ಆದರೂ ಸಿಎಂ ಬೊಮ್ಮಾಯಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಭ್ರಷ್ಟಾಚಾರದ ಆರೋಪ ಹೊತ್ತು ಡಿಕೆ ಶಿವಕುಮಾರ ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗಿದ್ದಾರೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ನವರಿಗೆ ತಾಕತ್ ಇದ್ದರೆ, ಅರ್ಕಾವತಿ ಹಗರಣದ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಲಿ ಎಂದು ಸವಾಲು ಹಾಕಿದ ಅವರು, ಬಡವರಿಗೆ ಕೊಡಬೇಕಾದ ಮನೆಗಳಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಲೂಟಿ ಮಾಡಿದೆ. ಸ್ವಯಂ ಘೋಷಿತ ಅಹಿಂದ ನಾಯಕ  ಸಿದ್ದರಾಮಯ್ಯ ತಮ್ಮ ಸರ್ಕಾರದಲ್ಲಿ ಹಿಂದುಳಿದವರಿಗೆ ಕೊಡುವ ಅನುದಾನದಲ್ಲಿ ಮೋಸ ಮಾಡಿದರು.ಬಿಬಿಎಂಪಿ ಕಸ ವಿಲೇವಾರಿ ಮಾಡುವ ವಿಚಾರದಲ್ಲಿ ಸಾಕಷ್ಟು ಹಗರಣ ಮಾಡಿದ್ದಾರೆ.
ಬಡವರಿಗೆ ಸಿಗಬೇಕಾದ ಮರಳು ಸಿಗುತ್ತಿಲ್ಲ ಎಂದು ದೂರಿದರು.