ಗದಗ (gadag): ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶ ಹೊರಡಿಸಿದ್ದು, ಇದು ಬಡವರು ಮತ್ತು ಸಾಮಾನ್ಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದ ಈ ಕೇಂದ್ರಗಳು ಶೇ. 70-90 ರಷ್ಟು ಕಡಿಮೆ ಬೆಲೆಯಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ವಾರ್ಷಿಕವಾಗಿ ಸುಮಾರು ₹40 ಕೋಟಿ ಉಳಿತಾಯಕ್ಕೆ ಸಹಾಯಕವಾಗಿದ್ದವು ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಇಲಾಖೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಸಮುದಾಯ ಆರೋಗ್ಯ ಕೇಂದ್ರಗಳು (CHC), ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ ಸುಮಾರು 200 ಜನೌಷಧಿ ಕೇಂದ್ರಗಳನ್ನು ಮುಚ್ಚಿಸುವ ನಿರ್ಧಾರವು “ಬಡವರ ಹಣ ಹಾಗೂ ಹೆಣದ ಮೇಲೆ ಸವಾರಿ ಮಾಡುವ” ಕೆಲಸಕ್ಕೆ ಸಮ ಎಂದು ಸಿ.ಸಿ. ಪಾಟೀಲ ಆರೋಪಿಸಿದ್ದಾರೆ.
ಜನೌಷಧಿ ಕೇಂದ್ರಗಳು ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವ ಮೂಲಕ ಆರ್ಥಿಕವಾಗಿ ಬೆಂಬಲ ನೀಡುತ್ತಿದ್ದವು. ಇಂತಹ ಜನಪರ ಯೋಜನೆಯನ್ನು ಸ್ಥಗಿತಗೊಳಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಅತ್ಯಂತ ಜನವಿರೋಧಿ ನಡೆಯಾಗಿದ್ದು, ತಕ್ಷಣವೇ ಈ ಆದೇಶವನ್ನು ಹಿಂಪಡೆಯಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ನಿರ್ಧಾರದಿಂದ ಬಡವರು ಮತ್ತು ಮಧ್ಯಮ ವರ್ಗದ ಜನರು ಔಷಧಿಗಳಿಗಾಗಿ ಹೆಚ್ಚು ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದು ಆರೋಗ್ಯ ಸೇವೆಗಳನ್ನು ಮತ್ತಷ್ಟು ದುಬಾರಿಯನ್ನಾಗಿಸಿ, ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಲಿದೆ ಎಂಬ ಕಳವಳ ವ್ಯಕ್ತವಾಗಿದೆ.