ಹಾವೇರಿ: ಈ ವರ್ಷದ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗದ ಪರವಾಗಿರುತ್ತದೆ. ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ತೆಗೆದುಕೊಂಡಾಗ 5 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು  ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ.‌

72 ಸಾವಿರ ಕೋಟಿ ಸಾಲ ತೆಗೆದುಕೊಳ್ಳುವ ಅವಕಾಶ ಇದ್ದರೂ ನಾವು ಕೇವಲ 61 ಸಾವಿರ ಕೋಟಿಗೆ ಮಿತಿಗೊಳಿಸಿದ್ದೇವೆ.‌ ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ.  ನಾವು ಈ ವರ್ಷ 61 ಸಾವಿರಕ್ಕೆ ಮಿತಿಗೊಳಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಹತ್ತು ಹಲವಾರು ವರ್ಷಗಳಿಂದ ಸರ್ಕಾರಗಳು ಮಾಡಿರುವ ಸಾಲವನ್ನು ತೀರಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಕೇವಲ 9% ರಾಜ್ಯದ ಅಭಿವೃದ್ಧಿ ಆಗುತ್ತಿದೆ. ಅದರ ಗತಿಯನ್ನಿಟ್ಟುಕೊಂಡು ಸಾಮಾಜಿಕವಾಗಿ ಅಭಿವೃದ್ಧಿ ಮಾಡಿ ಸಮತೋಲನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಮುಂದಿನ ಎರಡು, ಮೂರು ವರ್ಷ ಸಮತೋಲನ ಕಾಪಾಡಿಕೊಂಡರೆ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಿದೆ.

ಈ ವರ್ಷ 8101 ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಅವೆಲ್ಲವೂ ಮೇ, ಜೂನ್ ವೇಳೆಗೆ ನಿರ್ಮಾಣ ಆಗುತ್ತವೆ. ಅದೇ ವೇಗವನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ. ಆರೋಗ್ಯ ಕ್ಷೇತ್ರದಲ್ಲಿ ನಾವು ಪ್ರಗತಿಯಲ್ಲಿ ಹೋಗುತ್ತಿದ್ದೇವೆ. ನಮ್ಮ ಪ್ರಾತಿನಿಧ್ಯ ಆರೋಗ್ಯ, ಶಿಕ್ಷಣದ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲದಕ್ಕೂ ಇರುತ್ತದೆ.

ಶಿಗ್ಗಾಂವ ಮತ್ತು ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಪಣ
ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಶಿಗ್ಗಾಂವ ಮತ್ತು ಸವಣೂರು ಮಾಡಲು ನಾನು ಪಣ ತೊಟ್ಟಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ  ಶಿಕ್ಷಣ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದರು.

ಅಮಿತ್ ಶಾ ಭೇಟಿ ಉಕ ಭಾಗದಲ್ಲಿ ಬಜೆಪಿ ಅಲೆ ಹೆಚ್ಚಿಸಿದೆ
ಕಿತ್ತೂರು ಕರ್ನಾಟಕ ಭಾಗಕ್ಕೆ‌ ಅಮಿತ ಶಾ ಅವರು ನೀಡಿದ ಭೇಟಿಯಿಂದ ಅಲೆ ಹೆಚ್ಚಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಅಲೆ ಸುನಾಮಿಯಾಗಿ, ನಾವು ಕಳೆದ ಭಾರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದರು.