ಗದಗ: ಶಹರ ಪೊಲೀಸರು ಕೇವಲ ಎರಡು ದಿನಗಳಲ್ಲಿ ಬರೋಬ್ಬರಿ 1805 ಕೆ.ಜಿ ಅಕ್ರಮ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ₹40,613/- ಮೌಲ್ಯದ ಈ ಅಕ್ಕಿ ಸಂಗ್ರಹದ ಕುರಿತು Essential Commodities Act-1955 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ಶಹರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಗದಗ ಶಹರ ಪೊಲೀಸರು ದಾಖಲಿಸಿದ್ದಾರೆ. ಕೇವಲ ಎರಡು ದಿನಗಳ ಅಂತರದಲ್ಲಿ ಬರೋಬ್ಬರಿ 1805 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ ₹40,613/- ಆಗಿದೆ.
ಆಹಾರ ಇಲಾಖೆಯ ಅಧಿಕಾರಿ ನಿಂಗಪ್ಪ ತಂದೆ ಬಸಪ್ಪ ದೊಡ್ಡಮನಿ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗದಗ ಶಹರದ ದಾಸರ ಓಣಿಯಲ್ಲಿರುವ ಸಲೀಮ ಬುರಬರೆ ಇವರ ಮನೆಯ ಮುಂದೆ ಇರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಒಟ್ಟು 885 ಕೆ.ಜಿ. ಪಡಿತರ ಅಕ್ಕಿಯನ್ನು (21 ಪ್ಲಾಸ್ಟಿಕ್ ಚೀಲಗಳಲ್ಲಿ) ಇಡಲಾಗಿತ್ತು. ಇದರ ಮೌಲ್ಯ ₹19,913/- ಎಂದು ಅಂದಾಜಿಸಲಾಗಿದೆ.
ಎರಡನೇ ಪ್ರಕರಣದಲ್ಲಿ ಗದಗ ಶಹರದ ರಹಮತ ನಗರದ ಪಕ್ಕದಲ್ಲಿರುವ ವೀರಶೈವ ಸ್ಮಶಾನದ ಉತ್ತರ ಭಾಗದ ಖಾಲಿ ಜಾಗದಲ್ಲಿ ಒಟ್ಟು 920 ಕೆ.ಜಿ. ಪಡಿತರ ಅಕ್ಕಿಯನ್ನು (22 ಪ್ಲಾಸ್ಟಿಕ್ ಚೀಲಗಳಲ್ಲಿ) ಸಂಗ್ರಹಿಸಿಡಲಾಗಿತ್ತು. ಇದರ ಮೌಲ್ಯ ₹20,700/- ಎಂದು ಅಂದಾಜಿಸಲಾಗಿದೆ.
ಎರಡೂ ಪ್ರಕರಣಗಳಲ್ಲಿ ಅನಾಮಧೇಯ ಆರೋಪಿತರ ವಿರುದ್ಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.