ಗದಗ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಗಾದಿಯ ಮೇಲಾಟ ತೀವ್ರಗೊಂಡಿರುವ ಸಂದರ್ಭದಲ್ಲೇ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೇರ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ ಎಂಬ ವಾತಾವರಣ ಸ್ಪಷ್ಟವಾಗಿದೆ ಎಂದಿರುವ ಅವರು, “ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಅಥವಾ ಮಾತು ತಪ್ಪಿದ ಮಗನಾಗಿ ಅಧಿಕಾರದಲ್ಲಿ ಮುಂದುವರಿಯಲಿ” ಎಂದು ಖಾರವಾಗಿ ನುಡಿದಿದ್ದಾರೆ.

ಶನಿವಾರ ಗದಗಿನ ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಸಿಎಂ-ಡಿಸಿಎಂ ಇಬ್ಬರೂ ಬದ್ಧರಾಗಿದ್ದಾರೆ. ಎರಡೂವರೆ ವರ್ಷಗಳ ನಂತರ ಸಿಎಂ ಸ್ಥಾನ ಬಿಟ್ಟುಕೊಡುವ ಒಪ್ಪಂದವೇ ಸದ್ಯ ನಡೆಯುತ್ತಿರುವ ಕುರ್ಚಿ ಚರ್ಚೆಗೆ ಸಾಕ್ಷಿ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಕುಂಠಿತ!
ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಈ ಹಗ್ಗಜಗ್ಗಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ನಿರಾಸಕ್ತಿ ಕುರಿತು ಅವರು ಗಂಭೀರ ಆರೋಪಗಳನ್ನು ಮಾಡಿದರು.

ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದರೂ, ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿಲ್ಲ. ಅಲ್ಲದೆ, ತುಂಗಭದ್ರಾ ಜಲಾಶಯದಿಂದ 2ನೇ ಬೆಳೆಗೆ ಭತ್ತ ಬೆಳೆಯುವ ರೈತರಿಗೆ ನೀರು ಸಿಗುತ್ತಿಲ್ಲ. ಇದರ ಜೊತೆಗೆ, ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಗುಡುಗಿದರು.

ಬೆಳಗಾವಿ ಅಧಿವೇಶನ ‘ಕಾಟಾಚಾರಕ್ಕೆ’
ಬೆಳಗಾವಿಯಲ್ಲಿ ನಡೆಯಲಿರುವ ಮುಂಬರುವ ಚಳಿಗಾಲದ ಅಧಿವೇಶನದ ಕುರಿತು ಪ್ರಸ್ತಾಪಿಸಿದ ಶ್ರೀರಾಮುಲು, ಅದು ಕೇವಲ ‘ಕಾಟಾಚಾರಕ್ಕಾಗಿ’ ನಡೆಯುತ್ತಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವುದು ಕಷ್ಟವಾಗಿದ್ದು, ಇಡೀ ಅಧಿವೇಶನ ಗೊಂದಲದ ಗೂಡಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ಪ್ರತಿಪಕ್ಷದ ಎಲ್ಲ ನಾಯಕರು ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟದ ಕುರಿತು ಚರ್ಚಿಸಲು ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸ್ಪಷ್ಟನೆ
ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಾಹ್ಯ ಬೆಂಬಲ ನೀಡುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ತಮ್ಮ ನಿಲುವು ಸ್ಪಷ್ಟಪಡಿಸಿದರು. ಸರಕಾರವೇ ಗೊಂದಲ ಸೃಷ್ಟಿಸಿಕೊಂಡು ಮಧ್ಯಂತರ ಚುನಾವಣೆಗೆ ಸಿದ್ಧವಾಗುತ್ತಿದೆ. ಹೀಗಾಗಿ, ಬಿಜೆಪಿ ಯಾವುದೇ ಕಾರಣಕ್ಕೂ ಅವರಿಗೆ ಬಾಹ್ಯ ಬೆಂಬಲ ನೀಡುವುದಿಲ್ಲ. ಯಾವ ಕಾರಣಕ್ಕೂ ಡಿ.ಕೆ. ಶಿವಕುಮಾರ್ ಜೊತೆ ಬಿಜೆಪಿ ಕೈ ಜೋಡಿಸುವುದಿಲ್ಲ ಎಂದು ಖಚಿತಪಡಿಸಿದರು.