ಬೆಂಗಳೂರು: ಕಾಂತಾರಾ ಚಿತ್ರ ಕೇವಲ ಚಂದನವನ ಅಷ್ಟೇ ಅಲ್ಲದೇ, ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿ ಪ್ರದರ್ಶನ ಕಂಡಿದೆ. ಆದರೆ, ಈ ಚಿತ್ರದ ‘ವಾರಹ ರೂಪಂ..’ ಹಾಡು ವಿವಾದಕ್ಕೆ ಸಿಲುಕಿತ್ತು.
ನಮ್ಮ ಟ್ಯೂನ್ ಕಳ್ಳತನವಾಗಿದೆ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್ ’ನವರು ಆರೋಪಿಸಿದ್ದರು. ಹೀಗಾಗಿ ಈ ವಿಚಾರ ಸದ್ಯ ಕೋರ್ಟ್ ನಲ್ಲಿದ್ದು, ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಹಾಗೂ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ.
ಕೇರಳ ಹೈಕೋರ್ಟ್ ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಹಾಗೂ ವಿಜಯ್ಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಅಲ್ಲದೇ, ಷರತ್ತುಗಳನ್ನು ಕೂಡ ಹಾಕಲಾಗಿದೆ.
‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರುವವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ..’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದಾರೆ.
ತೈಕುಡಂ ಬ್ರಿಡ್ಜ್ನವರು ಕೋಯಿಕ್ಕೋಡ್ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ‘ವರಾಹ ರೂಪಂ..’ ಹಾಡಿನಲ್ಲಿ ಬಳಕೆ ಆದ ಟ್ಯೂನ್ ‘ನವರಸಂ’ ಹಾಡಿನದ್ದು ಎನ್ನುವ ಆರೋಪ ಕೇಳಿ ಬಂತು. ಈ ಪ್ರಕರಣದ ಸದ್ಯ ಕೋರ್ಟ್ ನಲ್ಲಿ ವಿಚಾರಣೆ ಆಗುತ್ತಿದೆ.