ಹುಬ್ಬಳ್ಳಿ: ಮೋದಿ ಕಂಡರೆ ನನಗೆ ಭಯ ಇಲ್ಲ. ದೇಶದ ಪ್ರಧಾನಿ ಎಂಬ ಗೌರವವಿದೆ. ಆದರೆ ನನ್ನ ಕಂಡರೆ ಅವರಿಗೆ ಭಯ. ಏಕೆಂದರೆ ನಾನು ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುತ್ತೇನೆ. ಸತ್ಯ ಹೇಳುತ್ತೇನೆ ಎನ್ನುವ ಭಯ ಅವರಿಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮೋದಿ ಭಾಷಣ ಮಾಡಿದರೆ ಬಿಜೆಪಿ ಗೆಲ್ಲುತ್ತದೆ ಎಂಬುದು ಸುಳ್ಳು. ಕೇರಳ ಸೇರಿದಂತೆ ಹಲವು ಕಡೆ ಭಾಷಣ ಮಾಡಿದ್ದಾರೆ ಅಲ್ಲಿ ಗೆದ್ದಿಲ್ಲ. ಮೋದಿ ಭಾಷಣ ಮಾಡಿದರೆ ಗೆಲುವು ಸಾಧ್ಯವಾ? ಅಂತ ಪ್ರಶ್ನಿಸಿದರು.
ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್. ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಚುನಾವಣಾ ಹಿನ್ನಲೆಯಲ್ಲಿ ಬಿಜೆಪಿಯವರು ಪ್ರಧಾನಿಯನ್ನು ಕರೆಸಿ ನಾವೇ ಮಾಡಿದ್ದೀವಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿರುವುದು ನಾವು. ಅಡಿಗೆ ಮಾಡಿದ್ದೀವಿ, ಊಟ ಬಿಜೆಪಿಗರು ಮಾಡುತ್ತಿದ್ದಾರೆ. ಲಂಬಾಣಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಸೇವಾಲಾಲ ಜಯಂತಿ ಮಾಡಿದ್ದೀವಿ ಎಂದು ತಿಳಿಸಿದರು.