ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ರನ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನುಗ್ಗೆಹಳ್ಳಿಯ ನಾರಾಯಣ ಗೌಡ ಎನ್ನುವ 17 ವರ್ಷದ ಬಾಲಕ ಡಿ. 6 ರಂದು ಅಪಘಾತಕ್ಕೀಡಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಮೆದುಳು ನಿಷ್ಕ್ರೀಯಗೊಂಡ ಕಾರಣ ನಾರಾಯಣಗೌಡ ಬದುಕುಳಿಯುವುದು ಅಸಾಧ್ಯವಾಗಿತ್ತು. ಹೀಗಾಗಿ ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸುವ ಮೂಲಕ ಪುತ್ರನ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.

ತಮ್ಮ ಏಕೈಕ ಪುತ್ರನ ಅಂಗಾಂಗ ದಾನಮಾಡಿ ಸಾರ್ಥಕತೆ ಮೆರೆದ ರಮೇಶ್ ಮತ್ತು ರಾದಾ ದಂಪತಿ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅವರ ದುಃಖದಲ್ಲಿ ಭಾಗಿಯಾಗಿದ್ದಾರೆ.

ಶನಿವಾರ ಮಧ್ಯಾಹ್ನದ ವೇಳೆಗೆ ಅಂಗಾಂಗ ದಾನ ಪ್ರಕ್ರಿಯೆ ಪೂರ್ಣಗೊಳಿಸಿ ಮೃತದೇಹವನ್ನು ಹಸ್ತಾಂತರ ಮಾಡಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.