ಬೆಂಗಳೂರು: ರಾಜ್ಯ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಈಚೆಗಷ್ಟೆ ಮೀಸಲಾತಿ ಹೆಚ್ಚಿಸಿ ಆದೇಶ ಹೊರಡಿಸಿತ್ತು.

ಹೊಸ ಆದೇಶವನ್ನು ಕಾರ್ಯಗತಗೊಳಿಸುವ ಸಂಬಂಧ ನೇರ ನೇಮಕಾತಿ ಮತ್ತು ಮುಂಬಡ್ತಿಯನ್ನು ತಡೆಹಿಡಿಯುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಪ್ರಕ್ರಿಯೆ ಅಂತಿಮಗೊಂಡು ಅಧಿಕೃತವಾಗಿ ಪ್ರಕಟವಾಗುವ ವರೆಗೂ ಎಲ್ಲ ನೇರ ನೇಮಕಾತಿ ಪ್ರಕ್ರಿಯೆನ್ನು ತಡೆಹಿಡಿಯಬೇಕು.

ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೀಡಲಾಗುವ ಮುಂಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದ ಇಲಾಖಾ ಮುಂಬಡ್ತಿ ಸಮಿತಿ ಸಭೆಯನ್ನು ಆಯೋಜಿಸಬಾರದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ, ಕಾರ್ಯದರ್ಶಿಗಳಿಗೆ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರಕಾರ ಇದೇ ನವೆಂಬರ್ 1ರಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚಿಸಲಾ ಮೀಸಲಾತಿ ಅನ್ವಯ ಪ್ರವೇಶ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿತ್ತು. ಈ ಆದೇಶ ಹೊರಬಿದ್ದ ಎರಡು ದಿನಗಳ ಅಂತರದಲ್ಲಿಯೇ ನೇರ ನೇಮಕಾತಿ ಮತ್ತು ಮುಂಬಡ್ತಿಗೂ ಹೆಚ್ಚಿಸಲಾದ ಮೀಸಲಾತಿ ಅನ್ವಯಿಸಲು ಸರಕಾರ ಮತ್ತೊಂದು ಆದೇಶ ಮಾಡಿದೆ.