ಬೆಳಗಾವಿ: 2023 ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸಾಕಷ್ಟು ಮುಂಚಿತವಾಗಿ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲು ಮುಂದಾಗಿದೆ.
ಆದರೆ ಟಿಕೆಟ್ ಹಂಚಿಕೆಯಲ್ಲಿ ಆತುರ ತೋರಬೇಡಿ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಕುಮಾರಸ್ವಾಮಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನುವುದು ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ ಟಿಕೆಟ್ ಹಂಚಿಕೆ ಕುರಿತಾಗಿ ರಮೇಶ ಜಾರಕಿಹೊಳಿ ನೀಡಿದ್ದಾರೆ ಎನ್ನಲಾಗುವ ಸಲಹೆ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ರಮೇಶ ಜಾರಕಿಹೊಳಿ ಜೆಡಿಎಸ್ ಪಾಳಯ ಸೇರಲಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ಆತುರ ತೋರಬಾರದು. ಅದರಲ್ಲೂ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆಯನ್ನು ಮಾಡಬಾರದು ಎಂದು ರಮೇಶ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದ್ದು, ಆ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರಿಗೆ ಜೆಡಿಎಸ್ ಟಿಕೆಟ್ ಕೊಡಿಸುವ ಚಿಂತನೆ ಇರುವುದು ಸ್ಪಷ್ಟವಾಗುತ್ತಿದೆ.