ಗದಗ: ಸ್ಮಾರ್ಟ್‌ ನೀರಾವರಿ ಪರಿಹಾರಗಳನ್ನು ಒದಗಿಸುವ ನೇಟಾಫಿಮ್‌, ಜಾಗತಿಕ ಖ್ಯಾತಿಯ ಕೃಷಿ ವಿಜ್ಞಾನಿ ಇತ್ಯೆಲ್‌ ಇವಿಯೇಟರ್‌ ಅವರ ಜೊತೆಗೂಡಿ ಗದಗ ಜಿಲ್ಲೆಯ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಒಂದು ಮತ್ತು ಮೂರನೇ ಪ್ಯಾಕೇಜ್‌ ವ್ಯಾಪ್ತಿಯಲ್ಲಿ ಬರುವ ರೈತರಿಗಾಗಿ ನಾಲ್ಕು ತಿಂಗಳ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.

ಈ ರೈತ ಶಿಕ್ಷಣ ಕಾರ್ಯಕ್ರಮಗಳು ಯೋಜನಾ ವ್ಯಾಪ್ತಿಯಲ್ಲಿ ಬರುವ ಈರುಳಿ, ಮೆಕ್ಕೆಜೋಳ, ಮೆಣಸು, ಹತ್ತಿ, ಶೇಂಗಾ, ಹೆಸರು ಮತ್ತು ಸೂರ್ಯಕಾಂತಿ ಬೆಳೆಯುವ ಸಾವಿರಾರು ರೈತರನ್ನು ತಲುಪುವ ಗುರಿ ಹೊಂದಿದೆ.

ತರಬೇತಿ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು 2022ರ ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಕೃಷಿ ಕ್ಷೇತ್ರ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳು, ವೈಯಕ್ತಿಕ ಮತ್ತು ಕ್ಲಸ್ಟರ್‌ ರೈತ ಸಭೆಗಳು ಮತ್ತು ಸಾಮರ್ಥ್ಯ ನಿರ್ಮಾಣ ಚಟುವಟಿಕೆಗಳು ಇದರಡಿ ನಡೆಯುತ್ತಿವೆ. ಹನಿ ನೀರಾವರಿ, ಫಲವತ್ತತೆ ಹೆಚ್ಚಳ, ಮಣ್ಣಿನ ಪೋಷಕಾಂಶ ಪತ್ತೆ ಕಿಟ್‌ಗಳು, ಕೃಷಿ ಯಾಂತ್ರೀಕರಣ ಮತ್ತು ಬೆಳೆ ಸಿದ್ಧತೆಗಳ ಮೇಲೆ ಶಿಕ್ಷಣ ಕಾರ್ಯಕ್ರಮ ಹೆಚ್ಚು ಗಮನ ಹರಿಸುತ್ತಿದೆ.

ಕ್ಷೇತ್ರ ತರಬೇತಿಯ ವೇಳೆ ರೈತರಿಗೆ ವೈವಿಧ್ಯಮಯ ಮಣ್ಣಿನ ಭೂಮಿಯಲ್ಲಿ ಬೆಳೆ ಬೆಳೆಯಲು ಅನುಸರಿಸಬಹುದಾದ ವಿವಿಧ ವಿಧಾನಗಳು, ಭೂಮಿ ಸಿದ್ಧತೆ, ಬಿತ್ತನೆ ಪದ್ಧತಿ, ಫಲವತ್ತತೆ, ನೀರಾವರಿ, ಬೆಳೆಗಳು ಬೆಳೆಯಲು ಅಗತ್ಯವಿರುವ ಗರಿಷ್ಠ ಅವಕಾಶ, ಬಯೋಟಿಕ್‌ ಮತ್ತು ಅಬಯೋಟಿಕ್‌ ಒತ್ತಡ ಸ್ಥಿತಿಗಳನ್ನು ನಿರ್ವಹಿಸುವುದು, ಕೃಷಿಯಲ್ಲಿ ಕಸಿ ಇತ್ಯಾದಿ ವಿಷಯಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ.

ವಿಜ್ಞಾನಿ ಇವಿಯೇಟರ್‌ ಅವರು ಯೋಜನಾ ಪ್ರದೇಶದ ನೀರು ಬಳಕೆದಾರ ಸಹಕಾರಿ ಸಂಘಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಜಾಗತಿಕವಾಗಿ ನಾಲ್ಕು ದಶಕಗಳಿಗೂ ಹೆಚ್ಚಿ ಅನುಭವ ಹೊಂದಿರುವ ಕೃಷಿ ವಿಜ್ಞಾನಿ ಇವಿಯೇಟರ್‌ ಅವರು ಅಮೆರಿಕ, ಆಫ್ರಿಕ, ಇಸ್ರೇಲ್‌, ಸ್ವಿತ್ಸರ್ಲಂಡ್‌, ಫಿಜಿ, ಚೀನಾ, ಪನಾಮ ಮತ್ತು ಶ್ರೀಲಂಕಾ ಇತ್ಯಾದಿ ರಾಷ್ಟ್ರಗಳಲ್ಲಿ ಬಹುಮುಖಿ ಕೃಷಿ ತರಬೇತಿ ಮತ್ತು ಅಧ್ಯಯನಗಳನ್ನು ಅವರು ಯಶಸ್ವಿಯಾಗಿ ನಡೆಸಿದ್ದಾರೆ. ತರಕಾರಿ, ತೋಟಗಾರಿಕೆ ಬೆಳೆಗಳ ಕೃಷಿ ನಿರ್ವಹಣೆ ಹಾಗೂ ನೀರಾವರಿ ನಿರ್ವಹಣೆಯಲ್ಲಿ ಅವರು ತಜ್ಞರಾಗಿದ್ದಾರೆ.

ತರಬೇತಿಯ ಕುರಿತು ಮಾತನಾಡಿದ ಇವಿಯೇಟರ್‌ ಅವರು “ಜಲಸಂಘಗಳ ಮೂಲಕ ತಮ್ಮ ನೀರಾವರಿ ವೇಳಾಪಟ್ಟಿಯನ್ನು ನಿರ್ವಹಿಸುವ ಬೆಳೆಗಾರರ ಸಮದಾಯದ ಪರಿಕಲ್ಪನೆ, ಸಾಮಾಜಿಕ, ಕೃಷಿ ಅರ್ಥವ್ಯವಸ್ಥೆ ಮತ್ತು ತಾಂತ್ರಿಕ ಅಂಶಗಳ ಸಂಯೋಜನೆಯಾಗಿದೆ. ಈ ತರಬೇತಿ ಮತ್ತು ಪ್ರದರ್ಶನಗಳ ಮೊದಲ ಗುರಿಯೆಂದರೆ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದು, ಬದಲಾಗುವ ಹವಾಮಾನದೊಂದಿಗೆ ಹೊಂದಿಕೊಳ್ಳಲು ಸಜ್ಜುಗೊಳಿಸುವುದು ಮತ್ತು ಸೂಕ್ತ ಬೆಳೆ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವುದಾಗಿದೆ” ಎಂದರು.

ಯೋಜನಾ ಪ್ರದೇಶದ ಅನೇಕ ರೈತರು ಈಗಾಗಲೇ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಲಹಾತ್ಮಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆ, ಸಮುದಾಯ ಆಧಾರಿತ ಹನಿ ನೀರಾವರಿ ಯೋಜನೆಯ ಮೂಲಕ ಸಂಪೂರ್ಣ ರೈತ ಸಮುದಾಯವನ್ನು ಒಗ್ಗೂಡಿಸುವ ಗುರಿ ಹೊಂದಿದೆ. ಇದರೊಂದಿಗೆ ವ್ಯವಸ್ಥಿತ ಮತ್ತು ಸುಸ್ಥಿರ ನೀರಾವರಿ ಪದ್ಧತಿಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಯ ಮೊದಲ ಹಂತದಲ್ಲಿ ಈ ಋತುವಿನಲ್ಲಿ 10,080 ಹೆಕ್ಟೇರ್‌ ಪ್ರದೇಶದಲ್ಲಿ 13 ಗ್ರಾಮಗಳ 7800 ರೈತರನ್ನು ಹನಿ ನೀರಾವರಿ ಯೋಜನೆಗಳ ಮೂಲಕ ಸಂಪರ್ಕಿಸುವ ಯೋಜನೆಯಿದ್ದು, ಈಗಾಗಲೇ ಬಹುಪಾಲು ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.