ಗದಗ: ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಕಣೇರಿ ಕಾಡಸಿದ್ಧೇಶ್ವರ ಮಠದ ಸ್ವಾಮಿಗಳು ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ಇವು ಸಮಾಜದಲ್ಲಿ ದ್ವೇಷ ಹರಡುವ ಮತ್ತು ಚಾರಿತ್ರ್ಯಹನನ ಮಾಡುವ ಉದ್ದೇಶ ಹೊಂದಿವೆ ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣೇರಿ ಶ್ರೀಗಳು ನಾವು ಮರಾಠಿ ಭಾಷೆಯ ಕುರಾನನ್ನು ಕನ್ನಡಕ್ಕೆ ಅನುವಾದಿಸಿ ಮಠದಿಂದ ಪ್ರಕಟಿಸಿದ್ದೇವೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ವಾಸ್ತವವಾಗಿ ನಾವು ಅನುವಾದಿಸಿರುವುದು ಹಿಂದೂ ಧರ್ಮದ ಶ್ರೇಷ್ಠ ಸಂತ ವಿನೋಬಾ ಭಾವೆ ಅವರ ‘ಇಸ್ಲಾಂ ಧರ್ಮ ಸಂದೇಶ’ ಎಂಬ ಹಿಂದಿ ಕೃತಿಯನ್ನೇ ಹೊರತು ಕುರಾನನ್ನಲ್ಲ.
ಈ ಕೃತಿಯನ್ನು ಪೂಜ್ಯ ಸಿದ್ಧೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು. ವಿಶೇಷವೆಂದರೆ ಆ ಕಾರ್ಯಕ್ರಮಕ್ಕೆ ಕಣೇರಿ ಶ್ರೀಗಳನ್ನೂ ಆಹ್ವಾನಿಸಲಾಗಿತ್ತು ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ನಿಂದನೆಯ ಆರೋಪ ನಿರಾಧಾರ
ಭಗವದ್ಗೀತೆಯನ್ನು ಬಯ್ದಿದ್ದೇವೆ ಎಂಬ ಆರೋಪಕ್ಕೂ ಉತ್ತರಿಸಿದ ಶ್ರೀಗಳು, ನಾವು ಯಾವುದೇ ಧರ್ಮ, ದೇವರು ಅಥವಾ ಭಗವದ್ಗೀತೆಯನ್ನು ಎಂದೂ ನಿಂದಿಸಿಲ್ಲ. ಭಾರತೀಯ ತತ್ವಶಾಸ್ತ್ರ ಕೃತಿಯಲ್ಲಿ ಡಾ. ಚಂದ್ರಧರ ಶರ್ಮಾ ಅವರ ಭಗವದ್ಗೀತೆಯ ಭಾಗವನ್ನು ಸುಂದರವಾಗಿ ಅನುವಾದಿಸಿಕೊಟ್ಟಿದ್ದೇವೆ. ಪೂಜ್ಯ ಸಿದ್ಧೇಶ್ವರ ಶ್ರೀಗಳು ರಚಿಸಿದ ಭಗವದ್ಗೀತಾ ಪ್ರವಚನದ ಕರಡು ಪ್ರತಿಯನ್ನು ಶ್ರದ್ಧೆಯಿಂದ ತಿದ್ದಿಕೊಟ್ಟಿದ್ದೇವೆ.
ಆಧಾರರಹಿತವಾಗಿ ಇಂತಹ ನಿರರ್ಥಕ ಆರೋಪಗಳನ್ನು ಮಾಡುವುದು ವ್ಯಕ್ತಿಯ ವಿರುದ್ಧ ಜನರನ್ನು ಎತ್ತಿಕಟ್ಟುವ ದ್ವೇಷದ ರಾಜಕಾರಣವಾಗಿದೆ. ಕಣೇರಿ ಶ್ರೀಗಳು ಪದೇ ಪದೇ ಸುಳ್ಳು ಆರೋಪಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ.
ಈ ಹಿಂದೆಯೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಇವರಿಗೆ ಛೀಮಾರಿ ಹಾಕಿವೆ. ಅವರ ಮಾತುಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಹ, ಅವರು ಅನಾಗರಿಕರಂತೆ ವರ್ತಿಸುತ್ತಿರುವುದು ನೋವಿನ ಸಂಗತಿ ಎಂದು ಸಿದ್ಧರಾಮ ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಸುಳ್ಳು ಆರೋಪಗಳನ್ನು ಜನರು ನಿಜವೆಂದು ನಂಬಬಾರದು ಮತ್ತು ಭಕ್ತರ ಆಗ್ರಹದ ಮೇರೆಗೆ ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.