ಗದಗ: “ನಿಮಗೆ ಸ್ಕಾಲರ್ಶಿಪ್ ಕೊಡಿಸುತ್ತೇವೆ” ಎಂದು ನಂಬಿಸಿ, ವಿದ್ಯಾರ್ಥಿಗಳ ಹೆಸರಲ್ಲೇ ಬ್ಯಾಂಕ್ ಖಾತೆ ತೆರೆದು ಕೋಟ್ಯಂತರ ರೂಪಾಯಿ ಸೈಬರ್ ವಂಚನೆಗೆ ಬಳಸುತ್ತಿದ್ದ ಅಂತರ್ ರಾಜ್ಯ ಜಾಲವೊಂದನ್ನು ಗದಗ ಪೊಲೀಸರು ಪತ್ತೆಹಚ್ಚಿದ್ದಾರೆ.
ಗೋವಾದ ಕಡಲತೀರದಲ್ಲಿ ಅಡಗಿದ್ದ ಐವರು ಕಿಲಾಡಿಗಳನ್ನು ಸಿನಿಮಾ ಸ್ಟೈಲ್ನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಂಚನೆಯ ‘ಮಾಸ್ಟರ್ ಪ್ಲಾನ್’ ಹೀಗಿತ್ತು:
ಈ ಜಾಲದ ಪ್ರಮುಖ ಸಂಚುಕೋರರಾದ ವಿಜಯನಗರ ಜಿಲ್ಲೆಯ ವಾಕ್ಡೋತ್ ವಕೀಲ್ ಮತ್ತು ರಾಜು ಎಂಬುವವರು ಗದಗಿನ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು.
ಸ್ಕಾಲರ್ಶಿಪ್ ಆಸೆ ತೋರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಲ್ಲಿ ಖಾತೆ ತೆರೆಯಲು ತಾವೇ 2,000 ರೂ. ಡಿಪಾಸಿಟ್ ಮಾಡಿದ್ದರು. ಖಾತೆ ತೆರೆದ ಬೆನ್ನಲ್ಲೇ ವಿದ್ಯಾರ್ಥಿಗಳಿಂದ ಅವರ ATM ಕಾರ್ಡ್, ಪಾಸ್ಬುಕ್ ಮತ್ತು ಬ್ಯಾಂಕ್ಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ಗಳನ್ನು ತಮ್ಮ ವಶಕ್ಕೆ ಪಡೆಯುತ್ತಿದ್ದರು. ಈ ಖಾತೆಗಳನ್ನು ದೇಶಾದ್ಯಂತ ಸೈಬರ್ ವಂಚನೆಯಿಂದ ಬರುವ ಹಣವನ್ನು ವರ್ಗಾಯಿಸಲು (Money Laundering) ಬಳಸಿಕೊಳ್ಳಲಾಗುತ್ತಿತ್ತು.
ಗೋವಾ ಬೀಚ್ನಲ್ಲಿ ಖೆಡ್ಡಾಕ್ಕೆ ಬಿದ್ದ ಆರೋಪಿಗಳು!
ಬಂಧಿತರು ಈ ಬ್ಯಾಂಕ್ ಕಿಟ್ಗಳನ್ನು ಹಸ್ತಾಂತರಿಸಲು ಗೋವಾಕ್ಕೆ ತೆರಳುತ್ತಿರುವ ಖಚಿತ ಮಾಹಿತಿ ಲಭಿಸುತ್ತಿದ್ದಂತೆ, ಗದಗ ಎಸ್ಪಿ ರೋಹನ ಜಗದೀಶ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಗೋವಾದ ಪ್ರಸಿದ್ಧ ಕಲ್ಲಂಗೂಟ ಬೀಚ್ ಬಳಿ ಹೊಂಚು ಹಾಕಿದ್ದ ಸೈಬರ್ ಕ್ರೈಂ ಪೊಲೀಸರು, ಐವರು ಆರೋಪಿಗಳನ್ನು ಜಾಲಕ್ಕೆ ಬೀಳಿಸಿಕೊಂಡಿದ್ದಾರೆ.
ಬಂಧಿತರು ಇವರೇ
ರಾಜ ರೇಖೆನಾಯಕ (23) ದಾಸರಹಳ್ಳಿ ತಾಂಡಾ, ವಾಕ್ಡೋತ್ ವಕೀಲ ದೇವೆಂದ್ರ ನಾಯಕ (24), ಜೀಶಾನ್ ಅನ್ಸಾರಿ (22) -ಜಾರ್ಖಂಡ್ ಮೂಲದವನು. ಆಕಾಶ ಸೂರ್ಯಮೋಹನ (32) – ಛತ್ತೀಸಗಢ ಮೂಲದವನು. ಸಾಹಿಲ್ ಮನೋಹರ (22).
ವಶಪಡಿಸಿಕೊಂಡ ಸೊತ್ತುಗಳು:
ಆರೋಪಿಗಳಿಂದ 11 ಮೊಬೈಲ್ ಫೋನ್ಗಳು ಹಾಗೂ ಗದಗ ಮತ್ತು ಹಾವೇರಿ ಜಿಲ್ಲೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದ 8 ಬ್ಯಾಂಕ್ ಕಿಟ್ಗಳನ್ನು ಜಪ್ತು ಮಾಡಲಾಗಿದೆ. ಈ ಜಾಲವು ಈಗಾಗಲೇ ನೂರಾರು ಇಂತಹ ಖಾತೆಗಳನ್ನು ತೆರೆದಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ.