ಗದಗ: ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ರೋಣ ತಹಸೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯೂಟ್ಯೂಬ್ ಪತ್ರಕರ್ತನನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರೋಹನ ಜಗದೀಶ ಅವರು ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಯನ್ನು ಹನುಮಂತ ಚಲವಾದಿ ಎಂದು ಗುರುತಿಸಲಾಗಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?
ರೋಣ ತಹಸೀಲ್ದಾರ್ ನಾಗರಾಜ ಕೆ. ಅವರ ಮೇಲೆ ಜನವರಿ 25ರ ಮಧ್ಯರಾತ್ರಿ ಹಲ್ಲೆ ನಡೆದಿದೆ. ಹನುಮಂತ ಚಲವಾದಿ ಮತ್ತು ಶರಣಪ್ಪ ಎಂಬುವವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಹಸೀಲ್ದಾರ್ ದೂರು ದಾಖಲಿಸಿದ್ದರು.

ಬಂಧಿತ ಹನುಮಂತ ಚಲವಾದಿ ತನ್ನನ್ನು ಯೂಟ್ಯೂಬ್ ಪತ್ರಕರ್ತ ಎಂದು ಕರೆದುಕೊಳ್ಳುತ್ತಿದ್ದ. ಈತ ಈ ಹಿಂದೆಯೇ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನುವ ದೂರುಗಳಿದ್ದವು. ಇದೇ ಕಾರಣಕ್ಕೆ ತಹಸೀಲ್ದಾರ್ ನಾಗರಾಜ್ ಅವರು ಈತನಿಂದ ‘ಬಾಂಡ್ ಓವರ್’ (ಮುಚ್ಚಳಿಕೆ ಪತ್ರ) ಪಡೆದುಕೊಂಡಿದ್ದರು.

ತನ್ನ ಮೇಲೆ ಹಾಕಲಾಗಿದ್ದ ‘ಬಾಂಡ್ ಓವರ್’ ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ಹನುಮಂತ ಚಲವಾದಿ ತಹಸೀಲ್ದಾರ್ ಅವರ ಮನೆಗೆ ಅತಿಕ್ರಮವಾಗಿ ನುಗ್ಗಿದ್ದಾನೆ. ಮಧ್ಯರಾತ್ರಿ ಸಮಯದಲ್ಲಿ ತಹಸೀಲ್ದಾರ್ ಅವರೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ನೀಡಿದ ದೂರಿನನ್ವಯ ಕ್ರಮ ಕೈಗೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದರು.