ಗದಗ: ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲೇ ಜಿಲ್ಲೆಯಲ್ಲಿ ರಾಜಕೀಯ ಸಂಘರ್ಷವೊಂದು ಭುಗಿಲೆದ್ದಿದೆ. ಕೇಂದ್ರ ಸರ್ಕಾರದ ವಿಕಸಿತ ಭಾರತ್ (VB-GRAM G) ಯೋಜನೆಯ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್ ಅವರ ನಡುವೆ ವಾಗ್ವಾದ ನಡೆದಿದ್ದು, ಸಂಕನೂರ್ ಅವರು ವೇದಿಕೆಯಿಂದ ಬಹಿಷ್ಕಾರ ಹಾಕಿ ಹೊರನಡೆದಿದ್ದಾರೆ.

ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಚಿವ ಎಚ್.ಕೆ. ಪಾಟೀಲ್ ಅವರು ಭಾಷಣ ಮಾಡುತ್ತಿದ್ದರು. ಈ ವೇಳೆ ಕೇಂದ್ರ ಸರ್ಕಾರದ ಯೋಜನೆಯಾದ ವಿಬಿ ಜಿರಾಮ್ ಜಿ- VBGRAMG4ViksitBharat (Vikasit Bharat—Guarantee for Rozgar and Ajeevika Mission – Gramin) ಬಗ್ಗೆ ಪ್ರಸ್ತಾಪಿಸಿರು.

ಈ ವಿಕಸಿತ ಭಾರತ್ ಯೋಜನೆಯು ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ, ಇದು ನಿಜವಾದ ಬಡವರ ಪರವಾಗಿಲ್ಲ ಎಂದು ಎಚ್.ಕೆ. ಪಾಟೀಲ ಟೀಕಿಸಿದರು.

ಸಚಿವರ ಈ ಹೇಳಿಕೆಯನ್ನು ವೇದಿಕೆಯಲ್ಲಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ್ ತೀವ್ರವಾಗಿ ಖಂಡಿಸಿದರು. “ಸಾಂವಿಧಾನಿಕ ದಿನದಂದು ಪಕ್ಷಾತೀತವಾಗಿ ನಡೆಯಬೇಕಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಜನಪ್ರಿಯ ವಿಕಸಿತ ಭಾರತ್ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಟೀಕಿಸುತ್ತಿರುವುದು ಸರಿಯಲ್ಲ” ಎಂದು ಕಿಡಿಕಾರಿದರು.