ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಬೀದಿ ನಾಯಿಗಳ ಉಪಟಳವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ತುರ್ತು ಸುತ್ತೋಲೆ ಹೊರಡಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಕ್ರಮವಾಗಿದೆ. ಸರ್ವೋಚ್ಛ ನ್ಯಾಯಾಲಯದ (Supreme Court) ನಿರ್ದೇಶನದ ಅನ್ವಯ ಈ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಕೂಡಲೇ ಅನುಷ್ಠಾನಕ್ಕೆ ತರುವಂತೆ ಸೂಚಿಸಲಾಗಿದೆ.

ಶಾಲೆಗಳ ಆವರಣದಿಂದ ನಾಯಿಗಳನ್ನು ಸ್ಥಳಾಂತರಿಸಲು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ದಿನಾಂಕ: 28.11.2025ರ ಈ ಸುತ್ತೋಲೆಯಲ್ಲಿ, ಶಿಕ್ಷಣ ಸಂಸ್ಥೆಗಳು ಅನುಸರಿಸಬೇಕಾದ ನಿರ್ದಿಷ್ಟ ನಾಲ್ಕು ಕ್ರಮಗಳನ್ನು ವಿವರಿಸಲಾಗಿದೆ.

ನಾಯಿಗಳ ಗಣತಿ ಮತ್ತು ಮಾಹಿತಿ ರವಾನೆ: ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ನಾಯಿಗಳ ಸಂಖ್ಯೆಯನ್ನು ತಕ್ಷಣವೇ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು.

ಆಶ್ರಯ ತಾಣಗಳಿಗೆ ಸ್ಥಳಾಂತರ: ಗುರುತಿಸಿದ ನಾಯಿಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಾಯಿ ಆಶ್ರಯ ತಾಣಗಳಿಗೆ ಸುರಕ್ಷಿತವಾಗಿ ಸಾಗಿಸಲು ಸಹಕಾರ ನೀಡಬೇಕು.

ಕಾಂಪೌಂಡ್/ಬೇಲಿ ನಿರ್ಮಾಣ: ಒಮ್ಮೆ ನಾಯಿಗಳನ್ನು ಸ್ಥಳಾಂತರಿಸಿದ ನಂತರ, ಅವುಗಳು ಪುನಃ ಪ್ರವೇಶಿಸದಂತೆ ತಡೆಯಲು ಸಂಸ್ಥೆಯ ಆವರಣಕ್ಕೆ ಕಾಂಪೌಂಡ್ ಅಥವಾ ಬೇಲಿಯನ್ನು ನಿರ್ಮಿಸುವುದು ಕಡ್ಡಾಯ.

ನೋಡಲ್ ಅಧಿಕಾರಿಯ ನೇಮಕ: ಈ ಎಲ್ಲಾ ಚಟುವಟಿಕೆಗಳ ಮೇಲುಸ್ತುವಾರಿ ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯತೆಗಾಗಿ ಶಾಲೆಯ ಮುಖ್ಯಶಿಕ್ಷಕರು/ಪ್ರಾಂಶುಪಾಲರು/ಹಿರಿಯ ಸಹಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು.

ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯ ಅನುಪಾಲನಾ ಸಭೆ!
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರವು ಕಣ್ಗಾವಲು ಇರಿಸಿದೆ: ಶಾಲಾ/ಕಾಲೇಜುಗಳ ಮುಖ್ಯಸ್ಥರು ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮವಹಿಸಿರುವುದನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು ಖಚಿತಪಡಿಸಿಕೊಳ್ಳಬೇಕು.

ಪ್ರಗತಿ ಪರಿಶೀಲನೆ: ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳ ಅನುಷ್ಠಾನದ ಕುರಿತು ಪ್ರತಿ 15 ದಿನಗಳಿಗೊಮ್ಮೆ ಶಾಲಾ-ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ, ಅನುಪಾಲನೆ ಮಾಡಬೇಕು.

ಉನ್ನತ ಮಟ್ಟದ ಮೇಲುಸ್ತುವಾರಿ: ಆಯುಕ್ತರು, ಅಪರ ಆಯುಕ್ತರು (ಧಾರವಾಡ ಮತ್ತು ಕಲಬುರಗಿ), ನಿರ್ದೇಶಕರು ಇವರು ಕೂಡ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಮಕ್ಕಳ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು, ಶಾಲಾ/ಕಾಲೇಜು ಆವರಣದಲ್ಲಿ ಬೀದಿ ನಾಯಿಗಳಿಂದ ಯಾವುದೇ ಅವಘಡ ಸಂಭವಿಸದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಲು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ.