ಹಾವೇರಿ: ತಾಲೂಕಿನ ಗೌರಾಪುರ ಗ್ರಾಮದ ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹೊಸ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟ ಯುವಕರನ್ನು ಹಾನಗಲ್ಲ ತಾಲೂಕಿನ ವರ್ದಿ ಗ್ರಾಮದ ನಾಗರಾಜ ಶಿವಯೋಗೆಪ್ಪ ಪವಾಡಿ (27) ಹಾಗೂ ಶಂಕರಿಕೊಪ್ಪ ಗ್ರಾಮದ ಮಲ್ಲಿಕಾರ್ಜುನ ಮುರಿಗೆಪ್ಪ ದೇವಿಹೊಸೂರ (25) ಎಂದು ಗುರುತಿಸಲಾಗಿದೆ.

ಇಬ್ಬರೂ ಸಹೋದರ ಸಂಬಂಧಿಗಳಾಗಿದ್ದು, ಹಾವೇರಿಯಲ್ಲಿ ಹೊಸ ಯಮಹಾ 220 ಸಿಸಿ ಬೈಕ್ ಖರೀದಿಸಿ ತಮ್ಮ ಊರಾದ ವರ್ದಿಗೆ ಹಾನಗಲ್ಲ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು.

ಈ ವೇಳೆ, ಎದುರಿನಿಂದ ಅತಿ ವೇಗವಾಗಿ ಬಂದ ಮರಳಿನ ಟಿಪ್ಪರ್ ಲಾರಿಯು ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಗರಾಜ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸವಾರನ ಮುಖ ಛಿದ್ರಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೊಸ ಬೈಕ್ ಖರೀದಿಯ ಸಂತಸದಲ್ಲಿದ್ದ ಇಬ್ಬರು ಯುವಕರ ಅಕಾಲಿಕ ಮರಣವು ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.