ಗದಗ. ಉತ್ತರ ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಿಂದುಳಿದಿದೆ ಎನ್ನುವ ಭಾವನೆ ತೊಡೆದುಹಾಕುವ ರೀತಿಯಲ್ಲಿ ಸಮಿತಿ ವರದಿ ನೀಡಲಿ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸೋಮವಾರ ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಕುರಿತಾದ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗದಗ ಜಿಲ್ಲೆ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಲಕ್ಕುಂಡಿ ಇತಿಹಾಸ ಪ್ರಸಿದ್ಧ ದೇವಾಲಯಗಳು, ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಜಿಪ್ ಲೈನ್, ಡಂಬಳ ದೊಡ್ಡ ಬಸವೇಶ್ವರ ದೇವಸ್ಥಾನ, ಗಜೇಂದ್ರಗಡ ಕೋಟೆ, ಶಿರಹಟ್ಟಿಯ ಫಕಿರೇಶ್ವರ ಮಠ ಹೀಗೆ ಹತ್ತು ಹಲವು ತಾಣಗಳು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಗದಗ ಜಿಲ್ಲೆಯ ಈ ಎಲ್ಲ ಪ್ರವಾಸಿ ತಾಣಗಳು ದೇಶ ವಿದೇಶದ ಪ್ರವಾಸಿಗರನ್ನು ಆಹ್ವಾನಿಸುವ ಮುನ್ನ, ಸ್ಥಳೀಯ ಜನರನ್ನು ಆಕರ್ಷಿಸಬೇಕು. ಇಲ್ಲಿನ ವಿದ್ಯಾರ್ಥಿಗಳು, ರೈತರು ಈ ತಾಣಗಳನ್ನು ವೀಕ್ಷಿಸುವಂತಾಗಬೇಕು. ಉತ್ತರ ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಿಂದುಳಿದಿದೆ ಎನ್ನುವ ಭಾವನೆಯನ್ನು ತೊಡೆದುಹಾಕುವಂತೆ ಸಮಿತಿ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಎಂ.ಡಿ. ಮನೋಜಕುಮಾರ್, ಕೆಎಸ್ಡಿಸಿ ಎಂಡಿ ಜಗದೀಶ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಸಮಿತಿಯ ಸದಸ್ಯರಾದ ಜೆ.ಕೆ. ಜಮಾದಾರ, ಎಸ್.ಎಸ್ ಓದುಗೌಡರ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅಬ್ದುಲ್ ರಜಾಕ್ ಕಟ್ಟಿಮನಿ, ಪುಂಡಲೀಕ ಕಲ್ಲಹಳ್ಳಿ, ಕಿಶೋರಬಾಬು ನಾಗರಕಟ್ಟಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ., ಡಿಸಿಎಫ್ ದೀಪಿಕಾ ಬಾಜಪೇಯಿ, ಎಸಿ ಅನ್ನಪೂರ್ಣ ಇತರರು ಉಪಸ್ಥಿತರಿದ್ದರು.