ಬೆಳಗಾವಿ: ಜನಪ್ರತಿನಿಧಿಗಳಿಗೆ ಕರೆ ಮಾಡಿ ರಸ್ತೆ ಸರಿಪಡಿಸಿ, ನೀರು ಬರ್ತಿಲ್ಲ ಅಥವಾ ಕೆಲಸ ಕೊಡಿಸಿ ಎಂದು ಕೇಳುವುದನ್ನು ನಾವು ನೋಡಿದ್ದೇವೆ.
ಆದರೆ, ಇಲ್ಲೊಬ್ಬ ‘ಭೂಪ’ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿ ಇಟ್ಟ ಬೇಡಿಕೆ ಕೇಳಿದರೆ ನೀವು ಒಂದು ಕ್ಷಣ ಅವಾಕ್ಕಾಗುವುದಂತೂ ಖಂಡಿತ!
ಈಗಿನ ಕಾಲದ ಯುವಕರಿಗೆ ಕ್ರೇಜ್ ಎಷ್ಟಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಬೆಳಗಾವಿಯ ಯುವಕನೊಬ್ಬ ಶೆಟ್ಟರ್ ಅವರಿಗೆ ಕರೆ ಮಾಡಿ, ಮಾರುಕಟ್ಟೆಗೆ ಇನ್ನೂ ಬರದೇ ಇರುವ ‘ಐಫೋನ್ 17 ಪ್ರೊ ಮ್ಯಾಕ್ಸ್’ (iPhone 17 Pro Max) ಬೇಕು ಎಂದು ಡಿಮ್ಯಾಂಡ್ ಮಾಡಿದ್ದಾನೆ.
ಏನಿದು ‘ಐಫೋನ್’ ಪ್ರಸಂಗ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಪ್ರಕಾರ, ಘಟನೆ ನಡೆದಿದ್ದು ಹೀಗೆ. ಆರಂಭದಲ್ಲಿ ಯುವಕ ಕರೆ ಮಾಡಿದ ತಕ್ಷಣ ತನ್ನನ್ನು “ಪ್ರತೀಕ್ ಮಲಜಿ” ಎಂದು ಪರಿಚಯಿಸಿಕೊಂಡಿದ್ದಾನೆ.
ಆರಂಭದಲ್ಲಿ ಬಹಳ ಗೌರವದಿಂದಲೇ ಶೆಟ್ಟರ್ ಅವರ ಯೋಗಕ್ಷೇಮ ವಿಚಾರಿಸಿದ್ದಾನೆ.
ಕುಶಲೋಪರಿ ವಿಚಾರಿಸಿದ ಬಳಿಕ, “ಸರ್, ನಿಮ್ಮಿಂದ ನನಗೊಂದು ಸಹಾಯ ಆಗಬೇಕಿತ್ತು” ಎಂದು ಪೀಠಿಕೆ ಹಾಕಿದ್ದಾನೆ. ಸಂಸದರು ಸಹಜವಾಗಿಯೇ ಏನೋ ಸಮಸ್ಯೆ ಇರಬಹುದು ಎಂದು ಭಾವಿಸಿ “ಹೇಳಿ” ಎಂದಿದ್ದಾರೆ.
ಆಗ ಆ ಯುವಕ, “ಸರ್, ಹೊಸ ಐಫೋನ್ 17 ಪ್ರೊ ಮ್ಯಾಕ್ಸ್ ರಿಲೀಸ್ ಆಗಿದೆ. ನನಗೊಂದು ಬೇಕಿತ್ತು..” ಎಂದು ಬಾಂಬ್ ಸಿಡಿಸಿದ್ದಾನೆ!
ತಬ್ಬಿಬ್ಬಾದ ಜಗದೀಶ್ ಶೆಟ್ಟರ್!
ಯುವಕನ ಈ ವಿಚಿತ್ರ ಹಾಗೂ ಅನಿರೀಕ್ಷಿತ ಬೇಡಿಕೆ ಕೇಳಿ ಮಾಜಿ ಸಿಎಂ ಒಂದು ಕ್ಷಣ ದಂಗಾಗಿದ್ದಾರೆ. ಈತನ ಹುಚ್ಚಾಟಕ್ಕೆ ಬೇಸರಗೊಂಡ ಅವರು, “ಎಂಪಿ ಹತ್ರ ಇಂಥಾ ಬೇಡಿಕೆ ಕೇಳ್ತಿರಲ್ವಾ?” ಎಂದು ಗರಂ ಆಗಿ ಪ್ರಶ್ನಿಸಿ ತಕ್ಷಣವೇ ಫೋನ್ ಕಟ್ ಮಾಡಿದ್ದಾರೆ.
ಸದ್ಯ ಈ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು, ಯುವಕನ ಧೈರ್ಯ ಮತ್ತು ಮುಗ್ಧತೆಯನ್ನು ಕಂಡು ಜನ ಬಿದ್ದು ಬಿದ್ದು ನಗುತ್ತಿದ್ದಾರೆ.