ಬೆಳಗಾವಿ: MES ಪುಂಡರು ಬೆಳಗಾವಿಯ ಸುವರ್ಣ ಸೌಧದ ಬಳಿ ಸರ್ಕಾರಿ ವಾಹನಕ್ಕೆ ಕಲ್ಲೆಸಿದ್ದಾರೆ ಎಂದು ಚಾಲಕ ಕತೆ ಕಟ್ಟಿದ. ಈಗ ಆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಬೆಳಗಾವಿಯ ಹಿರೆಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆಗ ವಾಹನ ಅಪಘಾತದಲ್ಲಿ ಮುಂದಿನ ಗಾಜು ಜಖಂಗೊಂಡಿದೆ ಎಂದು ತನಿಖೆಯಿಂದ ಬಯಲಾಗಿದೆ.

ಚಾಲಕ ಚೇತನ ಮರಾಠಿಗರು ಕಲ್ಲು ಎಸೆದು, ಬೆದರಿಕೆ ಹಾಕಿದ್ದಾಗಿ ಹೇಳಿದ್ದ. ಹಿರೇಬಾಗೇವಾಡಿ ಟೋಲ್ ನಲ್ಲಿ ವಾಹನದ ಗಾಜು ಜಖಂ ಆಗಿರುವುದು ಸಿಸಿಟಿವಿ ದೃಶ್ಯ ತೋರಿಸಿದಾಗ ಚಾಲಕ ತಪ್ಪೊಪ್ಪಿಕೊಂಡಿದ್ದಾನೆ. ಚಾಲಕನ ವಿರುದ್ಧ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಬೆಳಗಾವಿಗೆ ಬರುವಾಗ ಹಿರೇಬಾಗೇವಾಡಿ ಟೋಲ್ ಬಳಿ ಸ್ಟೀಲ್ ಬಾರ್ ಸಾಗಿಸುತ್ತಿದ್ದ ಲಾರಿಗೆ ವಾಹನ ಡಿಕ್ಕಿ ಹೊಡೆದು ಗಾಜು ಜಖಂಗೊಂಡಿದೆ. ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವ, ಭಯದಿಂದ ಚೇತನ್ ಮರಾಠಿಗರು ಕಲ್ಲು ತೂರಾಟ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಾನೆ. ಪೊಲೀಸ್ ರ ತನಿಖೆಯಲ್ಲಿ ಸತ್ಯ ಗೊತ್ತಾಗಿದೆ.