ಬೆಂಗಳೂರು:  “ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯತೆ ಬಗ್ಗೆ ಆರೋಪ ಪಟ್ಟಿ” ಎಂಬ ಶೀರ್ಷಿಕೆಯಡಿಯಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ “ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ಸಂಗತಿಗಳನ್ನು” ಪ್ರಸಾರ ಮಾಡಿರುವ ಆರೋಪದ ಮೇಲೆ ರಾಜ್ಯ ಸರ್ಕಾರವು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.

ಮೊಕದ್ದಮೆ ವಿವರಗಳು
ಬೆಂಗಳೂರಿನ ಮಾನ್ಯ 42ನೇ ಸಿಎಂಎಂ ನ್ಯಾಯಾಲಯದಲ್ಲಿ ಈ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸಿಆಸು ಇಲಾಖೆ) ಅವರನ್ನು ಈ ದೂರು ದಾಖಲಿಸಲು ಅಧಿಕೃತಗೊಳಿಸಲಾಗಿದೆ.

ವಿಶೇಷ ತಂಡ
ಈ ಪ್ರಕರಣವನ್ನು ನಿರ್ವಹಿಸಲು ಇಬ್ಬರು ಸರ್ಕಾರಿ ಅಭಿಯೋಜಕರನ್ನು ನಿಯೋಜಿಸಲಾಗಿದೆ. ಬೆಂಗಳೂರಿನ 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಶ್ರೀ ಬಿ.ಎಸ್. ಪಾಟೀಲ್ ಮತ್ತು 61ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಶ್ರೀಮತಿ ಶೈಲಜಾ ನಾಯಕ್ ಅವರು ಪ್ರಕರಣದ ನೇತೃತ್ವ ವಹಿಸಲಿದ್ದಾರೆ.

ಸಮನ್ವಯ ಸಮಿತಿ ರಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳು ಮತ್ತು ಮಾಹಿತಿ ಒದಗಿಸಲು ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಯ ಸರ್ಕಾರದ ಉಪ ಕಾರ್ಯದರ್ಶಿ ಶ್ರೀ ಕುಮಟಾ ಪ್ರಕಾಶ್ ಅವರನ್ನು ನೇಮಿಸಲಾಗಿದೆ. ಅವರು ಎಲ್ಲಾ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಸರ್ಕಾರಿ ಅಭಿಯೋಜಕರಿಗೆ ಸಂಪೂರ್ಣ ಮಾಹಿತಿ ಒದಗಿಸುವ ಜವಾಬ್ದಾರಿ ವಹಿಸಲಿದ್ದಾರೆ.

ಈ ಆದೇಶವು ಕರ್ನಾಟಕ ರಾಜ್ಯಪಾಲರ ಸೂಚನೆ ಮತ್ತು ಅವರ ಹೆಸರಿನಲ್ಲಿ ಹೊರಡಿಸಲಾಗಿದೆ. ಸುಳ್ಳು ಪ್ರಚಾರ ಮತ್ತು ಸರ್ಕಾರದ ವಿರುದ್ಧದ ಆರೋಪಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕಾನೂನು ಕ್ರಮ ಮಹತ್ವದ್ದಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.