ಗದಗ:  ಬೇಡಿದ ವರ ನೀಡುವ ಸರಕಾರಿ ಕಾಮರತಿಯನ್ನು ಗದಗ ಬೆಟಗೇರಿ ಅವಳಿ ನಗರದಲ್ಲಿ ಪ್ರತಿಷ್ಠಾಪಿಸಲಾಗಿದೆ.

158 ವರ್ಷಗಳ ಇತಿಹಾಸ ಹೊಂದಿರುವ ಈ ಕಾಮರತಿಯನ್ನು ಹುಣ್ಣಿಮೆ ದಿನ ಮೆರವಣಿಗೆ ಮೂಲಕ ಕಿಲ್ಲಾ ಚಂದ್ರಸಾಲಿ ಓಣಿಯಲ್ಲಿ, ತ್ರಿಕೂಟೇಶ್ವರ ದೇವಸ್ಥಾನದ ಉತ್ತರದ ದ್ವಾರ ಬಾಗಿಲಲ್ಲಿ ಪ್ರತಿಷ್ಠಾಪಿಸಲಾಗಿದೆ.

ಹೋಳಿ ಹುಣ್ಣಿಮೆಯ 5ನೇ ದಿನವಾದ ಶನಿವಾರ  ಬಂಗಾರ ಆಭರಣದಿಂದ ಅಲಂಕೃತ ಕಾಮರತಿ ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ಈ ಕಾಮರತಿ ಉತ್ಸವಕ್ಕೆ ಬ್ರಿಟಿಷ್ ರು 5 ರೂ. ದೇಣಿಗೆ ನೀಡುತ್ತಿದ್ದರು.‌ಸ್ವಾತಂತ್ರ್ಯ ನಂತರ ಗದಗ ಬೆಟಗೇರಿ ನಗರಸಭೆಯೂ ಉತ್ಸವ ಆಚರಣೆಗೆ ಹಣ ನೀಡುತ್ತಿತ್ತು. ಆ ಕಾರಣಕ್ಕೆ ಇದಕ್ಕೆ ಸರಕಾರಿ ಕಾಮರತಿ ಎನ್ನುವ ಹೆಸರು ಬಂದಿದೆ.

ಅಲ್ಲದೇ ಈ ಕಾಮರತಿ ಮೈಮೇಲೆ ಬಂಗಾರ ಹಾಕಿ, ಅದನ್ನು ಮರಳಿ ಪಡೆಯುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.

ಹೀಗಾಗಿ ಭಕ್ತರು ಕಾಮರತಿ ಮೈಮೇಲೆ ಬಂಗಾರದ ಆಭರಣಗಳನ್ನು ಹಾಕುವುದನ್ನು ರೂಢಿಸಿಕೊಂಡಿದ್ದಾರೆ. ಪ್ರತಿ ವರ್ಷ ಕನಿಷ್ಠ 10 ಕೆಜಿಯಷ್ಟು ಬಂಗಾರ ಕಾಮರತಿ ಮೈಮೇಲೆ ಭಕ್ತರು ಹಾಕಿದ್ದನ್ನು ಕಾಣಬಹುದು.