ಗದಗ: ಬೈಕ್ಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಕೆಳಗೆ ಬಿದ್ದ ಸವಾರನ ಮೇಲೆ ಲಾರಿ ಹರಿದು, ವೃದ್ಧ ಮತ್ತು ಬಾಲಕಿಯೊಬ್ಬಳು ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ.
ಮೃತರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ನಿವಾಸಿಗಳಾದ ಅಲ್ಲಾಸಾಬ್ ನದಾಫ್ (62), ರಂಜಾನ್ ಬೇಗಂ (14) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಅಪ್ಪಣ್ಣ ಹಿರೇಮಠ, ಲಲಿತಾ ಹಂಚಿನಾಳ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲಾಸಾಬ ಮತ್ತು ರಂಜಾನ್ ಬೇಗಂ ಭಾನುವಾರ ಕೊಪ್ಪಳ ಜಾತ್ರೆ ಮುಗಿಸಿಕೊಂಡು ಗದಗ ತಾಲೂಕಿನ ಕಣಗಿನಹಾಳ ಗ್ರಾಮದ ಸಂಬಂಧಿಕರ ಮನೆಗೆ ಹೊರಟಿದ್ದರು. ಅದೇ ಮಾರ್ಗವಾಗಿ ಎದುರಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ.
ಮುಖಾಮುಖಿ ಡಿಕ್ಕಿಯಿಂದ ಕೆಳಗೆ ಬಿದ್ದ ಸವಾರರ ಮೇಲೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.