ಹಾಸನ: ಕಾಂಗ್ರೆಸ್ , ಬಿಜೆಪಿ ನಂತರ ಜೆಡಿಎಸ್ ಪಾಳಯದಲ್ಲೂ ಪ್ರವಾಸ ಪರ್ವ ಆರಂಭವಾಗಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಹಾಸನ ಪ್ರವಾಸ ನಂತರ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ಈ ಕುರಿತು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಮನೆ ದೇವರು ದೇವೇಶ್ವರನ ಪೂಜೆಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ವಾರ ಹಾಸನ ಜಿಲ್ಲೆ ಪ್ರವಾಸ ನಡೆಸಿ, ಜೆಡಿಎಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು. ಜೆಡಿಎಸ್ ಭದ್ರಕೋಟೆ ಹಾಸನವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು. ಅದಾದ ನಂತರ ರಾಜ್ಯ ಪ್ರವಾಸವನ್ನೂ ಮಾಡುತ್ತೆನೆ ಎಂದು ತಿಳಿಸಿದ್ದಾರೆ.
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಆ ಕುರಿತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ಮಾಡಿರುವ ಟ್ವಿಟ್ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಆ ಬಗ್ಗೆ ನಾನು ಏನೂ ಹೇಳುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.