ಕಲಬುರಗಿ: ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜಿವ ಬೆದರಿಕೆ ಹಾಕಿದ ಬಿಜೆಪಿ ಮುಖಂಡನ್ನು ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ.
ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಪೊಲೀಸರು ಹೈದ್ರಾಬಾದಿನಲ್ಲಿ ಬಂಧಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಶೂಟ್ ಮಾಡಲು ನಾವು ಸಿದ್ಧ ಎಂದು ಮಣಿಕಂಠ ರಾಠೋಡ ಈಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರದ ಮೇಲೆ ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕಮಕನೂರ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಆರೋಪಿ ಮಣಿಕಂಠ ತಲೆಮರೆಸಿಕೊಂಡಿದ್ದ. ಆದರೆ ಖಚಿತ ಮಾಹಿತಿ ಆಧರಿಸಿ ಚಿತ್ತಾಪುರ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಹೈದ್ರಾಬಾದಿನಲ್ಲಿ ಬಂಧಿಸಿ, ಕಲಬುರಗಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.