ಬಾಗಲಕೋಟೆ: ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು, ಬಾದಾಮಿ ಪೊಲೀಸ್ ಠಾಣೆಯ ಸಿಪಿಐ ಕರಿಯಪ್ಪ ಬನ್ನಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಆದೇಶ ಹೊರಡಿಸಿದ್ದಾರೆ.
ಕೆರೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು
ಹಲ್ಲೆ ನಡೆಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಲವು ಬಾರಿ ಒತ್ತಾಯಿಸಿದ್ದರು. ಈ ಸಂಬಂಧ ಅಕ್ಟೋಬರ್ 10ರಿಂದ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ, ಅಹೋರಾತ್ರಿ ಧರಣಿಗು ಮುನ್ನವೇ ಸಿಪಿಐ ಕರಿಯಪ್ಪ ಬನ್ನಿ ಅವರನ್ನು ಅಮಾನತುಗೊಳಿಸಿದೆ.
ಅಮಾನತು ಆದೇಶ ಹೊರಬೀಳುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಪ್ರಮುಖ ಜಗದೀಶ ಕಾರಂತ ನೇತೃತ್ವದಲ್ಲಿ ಅಕ್ಟೋಬರ್ 10ರಿಂದ ನಡೆಯಬೇಕಿದ್ದ ಅಹೋರಾತ್ರಿ ಧರಣಿ ಹಿಂಪಡೆಯಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಜಗದೀಶ ಕಾರಂತ, ಸರಕಾರ ತಡವಾಗಿಯಾದರೂ ದಿಟ್ಟ ಹೆಜ್ಜೆ ಇಟ್ಟಿದೆ. ಜೊತೆಗೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರ ಮೇಲೂ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.