ಗದಗ: ಕಳೆದ ಕೆಲವು ದಿನಗಳಿಂದ ಗದಗ-ಬೆಟಗೇರಿ ನಗರದಲ್ಲಿ ಕೇಳಿಬರುತ್ತಿದ್ದ ಚಿರತೆ (Leopard Sightings) ಇರುವಿಕೆಯ ಆತಂಕ ಈಗ ದೂರವಾಗಿದೆ ಎಂದು ಗದಗ ವಲಯ ಅರಣ್ಯ ಇಲಾಖೆ (Gadag Range Forest) ಅಧಿಕೃತವಾಗಿ ಘೋಷಿಸಿದೆ.
ನವೆಂಬರ್ 25 ಮತ್ತು 26, 2025 ರಂದು ಪಂಚಾಕ್ಷರಿ ನಗರದ ಬುರಬುರೆ ಲೇಔಟ್‌ನ 6ನೇ ಕ್ರಾಸ್ ಮತ್ತು ಎಪಿಎಂಸಿ ಬರದೂರ ಟ್ರೇಡಿಂಗ್ ಕಂಪನಿ ಅಂಗಡಿ ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಓಡಾಟ ಕಂಡುಬಂದಿತ್ತು.
ಮಾಹಿತಿ ದೃಢಪಟ್ಟ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಅದೇ ದಿನದಿಂದ ಸದರಿ ಸ್ಥಳ ಹಾಗೂ ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ “ಕುಂಚಿಂಗ್ ಆಪರೇಷನ್” (Combing Operation) ಆರಂಭಿಸಿದ್ದರು.
ಸತತ ಕಾರ್ಯಾಚರಣೆ ನಡೆಸಿದರೂ, ಇಲ್ಲಿಯವರೆಗೂ ಚಿರತೆಯ ಯಾವುದೇ ಚಲನವಲನ, ಹೆಜ್ಜೆ ಗುರುತುಗಳು ಅಥವಾ ಕುರುಹುಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಚಿರತೆಯು ತನ್ನ ಜಾಡು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದ ಕಡೆಗೆ ಹಿಂದಿರುಗಿದೆ ಎಂದು ಅರಣ್ಯ ಇಲಾಖೆಯು ಖಚಿತಪಡಿಸಿದೆ.
ಸಾರ್ವಜನಿಕರು ಇನ್ನು ಮುಂದೆ ಯಾವುದೇ ಭಯವಿಲ್ಲದೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಬಹುದು. ಆತಂಕ ಪಡುವ ಅಗತ್ಯವಿಲ್ಲ ಎಂದು ಗದಗ ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಚಿರತೆ ಕುರಿತ ಸುಳ್ಳು ಸುದ್ದಿಗಳನ್ನು (Fake News) ಹರಡಬಾರದು. ತಾವು ಯಾವುದೇ ವನ್ಯಜೀವಿ (Wildlife) ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಕಾನೂನು ಎಚ್ಚರಿಕೆ
ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 240 ರ ಪ್ರಕಾರ, ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಿಸುವುದು ಅಪರಾಧವಾಗಿದ್ದು, ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು. ಸಾರ್ವಜನಿಕರು ಈ ಕುರಿತು ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.