ಗದಗ: ಶ್ರೀರಾಮ ಸೇನೆ ಮುಖಂಡ ರಾಜು ಖಾನಪ್ಪನವರ ವಿರುದ್ಧ ತೋಂಟದಾರ್ಯ ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀಮಠದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ರಾಜು ಖಾನಪ್ಪನವರ ಹಾಗೂ ಅವರ ಸಹಚರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸಕ್ತ ವರ್ಷದ ಜಾತ್ರಾ ಸಮಿತಿ ಅಧ್ಯಕ್ಷರಾದ ಖ್ಯಾತ ವೈದ್ಯ ಡಾ. ಧನೇಶ್ ದೇಸಾಯಿ ಹಾಗೂ ಅಪಾರ ಸಂಖ್ಯೆಯ ಭಕ್ತರು, ಎಸ್ಪಿ ಬಿ.ಎಸ್. ನೇಮಗೌಡ ಅವರನ್ನು ಭೇಟಿ ಮಾಡಿ ಈ ಕುರಿತು ಒತ್ತಾಯಿಸಿದರು.
ಭಾವೈಕ್ಯತೆಯ ಕೇಂದ್ರವಾದ ಶ್ರೀ ಜಗದ್ಗುರು ತೋಂಟದಾರ್ಯ ಮಠ, ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಇಂದಿನ ಪೀಠಾಧಿಪತಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ವಿರುದ್ಧ ರಾಜು ಖಾನಪ್ಪನವರು ಅವಮಾನಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಅಪಪ್ರಚಾರ ಮಾಡುವ ಮೂಲಕ ಅವರ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
ಶ್ರೀಮಠದ ಸುತ್ತಲೂ ಇರುವ ಅಂದಾಜು 80 ಎಕರೆ ಜಮೀನು ಮೂಲತಃ ಮಠದ ಮಾಲಿಕತ್ವಕ್ಕೆ ಸೇರಿದೆ. ಈ ಜಾಗೆಯಲ್ಲಿರುವ ಯಾವುದೇ ರಸ್ತೆಯನ್ನು ನಾವು ನಗರಸಭೆಯ ಸ್ವಾಧೀನಕ್ಕೆ ನೀಡಿಲ್ಲ. ನಮ್ಮ ಮಠಕ್ಕೆ ಯಾವುದೇ ಪರಿಹಾರ ನೀಡದೆ ನಗರಸಭೆಯು ಈ ಜಾಗೆಯನ್ನು ತನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ಭಕ್ತರು ಸ್ಪಷ್ಟಪಡಿಸಿದ್ದಾರೆ.
ನಗರಸಭೆ ಸ್ಥಾಪನೆಯಾಗುವುದಕ್ಕೂ ಮುಂಚಿನಿಂದಲೂ ಶ್ರೀಮಠದ ಜಾತ್ರೆ ನಡೆದುಕೊಂಡು ಬರುತ್ತಿದೆ. ಈ ಜಾಗೆಯು ಮಠದ ಮಾಲಿಕತ್ವಕ್ಕೆ ಸೇರಿದ್ದೆಂಬುದಕ್ಕೆ ಸಾಕಷ್ಟು ದಾಖಲೆಗಳು ಹಾಗೂ ನಗರಸಭೆಯ ಆದೇಶಗಳು ಲಭ್ಯವಿವೆ.
ಆದರೂ, ಮಠದ ಈ ಎಲ್ಲ ಬೆಳವಣಿಗೆಯನ್ನು ಸಹಿಸದ ಕೆಲವರು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಹಾಗೂ ಈ ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಿಂದಿನ ಮತ್ತು ಇಂದಿನ ಶ್ರೀಗಳ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದುರುದ್ದೇಶದಿಂದ ರಾಜು ಖಾನಪ್ಪನವರು ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ಜಾತ್ರೆಯಲ್ಲಿ ನಡೆಯುವ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದಾರೆ. ಅಲ್ಲದೆ, ಪತ್ರಿಕಾಗೋಷ್ಠಿಗಳನ್ನು ನಡೆಸಿ ಶ್ರೀಗಳನ್ನು ಅವಮಾನಿಸುತ್ತಿದ್ದಾರೆ ಎಂದು ಭಕ್ತರು ದೂರಿದ್ದಾರೆ.
ಅವರ ಎಲ್ಲ ಹೇಳಿಕೆಗಳು ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿದ್ದು, ಕೇವಲ ಅಪಪ್ರಚಾರ ಮಾಡುವ ಉದ್ದೇಶದಿಂದ ಕೂಡಿವೆ. ಅವು ಸತ್ಯಕ್ಕೆ ದೂರವಾಗಿವೆ. ಅವರ ಈ ಹೇಳಿಕೆಗಳು ಹಾಗೂ ಕಾನೂನುಬಾಹಿರ ಹೋರಾಟಗಳು ಶ್ರೀಮಠದ ಭಕ್ತರ ಭಾವನೆಗಳಿಗೆ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆ ಉಂಟುಮಾಡಿವೆ. ಕಾರಣ, ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಸರ್ವ ಸಮುದಾಯದ ಭಕ್ತರು ಒತ್ತಾಯಿಸುತ್ತೇವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಅವರು ಮನವಿ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ ಅಸೂಟಿ, ಉಪಾಧ್ಯಕ್ಷ ಡಿ.ಜಿ ಜೋಗಣ್ಣವರ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಿ.ಎಸ್ ಸಂಶಿಮಠ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಸದಸ್ಯ ವಿನಾಯಕ ಮಾನ್ವಿ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ರಾಮಣ್ಣ ಫಲದೊಡ್ಡಿ, ಯಂಗ್ ಇಂಡಿಯಾ ಸಂಘಟನೆ ಮುಖ್ಯಸ್ಥ ವಿ.ಆರ್ ಗೋವಿಂದಗೌಡ್ರ
ಕೆ.ಎಚ್ ಬೇಲೂರ, ಎಸ್.ಎನ್ ಬಳ್ಳಾರಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್ ಚಟ್ಟಿ, ಸದಾಶಿವಯ್ಯ ಮದರಿಮಠ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರಾಜು ಗುಡಿಮನಿ, ಮಾರ್ತಾಂಡಪ್ಪ ಹಾದಿಮನಿ, ಗಂಗಾಧರ ಹಿರೇಮಠ, ಶ್ರೀಮಠದ ವ್ಯವಸ್ಥಾಪಕ ಎಂ.ಎಸ್ ಅಂಗಡಿ, ಗುರುಬಸವ ತಡಸದ, ಮಲ್ಲಿಕಾರ್ಜುನ ಐಲಿ ಇಂಜಿನಿಯರ್, ದಾನಯ್ಯ ಗಣಾಚಾರಿ, ಪ್ರಕಾಶ ಅಸುಂಡಿ, ಶೇಖಣ್ಣ ಕವಳಿಕಾಯಿ, ಗದಗ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಈಶಣ್ಣ ಮುನವಳ್ಳಿ.
ಬಲರಾಮ ಬಸವಾ, ಜಯಕರ್ನಾಟಕ ಸಂಘಟನೆ ಮುಖ್ಯಸ್ಥ ಚಂದ್ರಕಾಂತ ಚವ್ಹಾಣ, ರಾಮು ಬಳ್ಳಾರಿ, ಮುರುಘೇಶ ಬಡ್ನಿ, ವೀರಣ್ಣ ಜ್ಯೋತಿ, ಪ್ರಕಾಶ ಕೆರೂರ, ಎಂ.ಎಸ್ ಪಾಟೀಲ, ಜೆ.ಟಿ ವಿದ್ಯಾಪೀಠದ ಕಾರ್ಯದರ್ಶಿ ಪಟ್ಟಣಶೆಟ್ಟರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ಸಿದ್ಧಣ್ಣ ಬಂಗಾರಶೆಟ್ಟರ, ಅಮರೇಶ ಅಂಗಡಿ, ಅಶೋಕ ಕುಡತಿನಿ, ಕೆ.ಎಸ್ ಪಲ್ಲೇದ, ರಾಚಪ್ಪ ಮಿಣಜಗಿ, ಶೇಖಣ್ಣ ಕಳಸಾಪೂರ, ಎಸ್.ಎಸ್ ಭಜಂತ್ರಿ, ಮಾರುತಿ ಬುರಡಿ, ಪ್ರಕಾಶ ಉಗಲಾಟದ, ವೀರಣ್ಣ ಗೊಟಡಕಿ, ಸಿದ್ಧರಾಮಪ್ಪ ಗೊಜನೂರ, ಜಯಣ್ಣ ಶೆಟ್ಟರ, ವೈಜನಾಥ ಕೌತಾಳ, ಕುಮಾರ ಮಾದರ, ಅಲ್ತಾಫ್ ಖಾನಾಪೂರ, ಪರಶುರಾಮ ಸಮಗಾರ, ಶಿವಯೋಗಿ ತಡಸದ ಸೇರಿದಂತೆ ಅನೇಕ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.