ಹಾನಗಲ್: ಬೆಲೆ ಏರಿಕೆಯ ಸರದಾರ ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರರೂ ಆಗಿದ್ದಾರೆ.
ಮೋದಿ ಅವರು ಭಾಷಣದಲ್ಲಿ ಕೊಟ್ಟ ಭರವಸೆಯಲ್ಲಿ ಒಂದೇ ಒಂದು ಜಾರಿ ಆಗಿರುವ ಉದಾಹರಣೆ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ಹಾವೇರಿ ಜಿಲ್ಲೆಯಲ್ಲಿ 650 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಜನಾರ್ಪಣೆಗೊಳಿಸಿ,  ನೂತನ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹಾವೇರಿ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಅಧ್ಯಾತ್ಮಿಕವಾಗಿ ಶ್ರೇಷ್ಠತೆ ಪಡೆದಿರುವ ಜಿಲ್ಲೆ. ಈ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ ಎಂದು ಸಿ.ಎಂ ಚುನಾವಣೆಗಳ ಭರವಸೆ ವ್ಯಕ್ತಪಡಿಸಿದರು.

ನೀವು ಕಾಂಗ್ರೆಸ್ ಪಕ್ಷಕ್ಕೆ, ಈ ಸರ್ಕಾರಕ್ಕೆ ಕೊಟ್ಟ ಮತಗಳಿಗೆ ನಾವು ಘನತೆಯಿಂದ ಗೌರವಿಸಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತಿನಂತೆ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೊಳಿಸಿ ನಿಮ್ಮ ಮತಗಳ ತೂಕ ಹೆಚ್ಚಿಸಿದ್ದೇವೆ ಎಂದರು.

ಆರ್.ಅಶೋಕ, ವಿಜಯೇಂದ್ರ ಈಗ ನಮ್ಮ ಸರ್ಕಾರದ ವಿರುದ್ಧ ನಕಲಿ ಜನಾಕ್ರೋಶ ಸಭೆ ನಡೆಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು ಎಂದು ಟೀಕಿಸಿದರು.

ಶಾಸಕ ಮಾನೆಯವರು ಕ್ಷೇತ್ರಕ್ಕೆ  ಮಾಡಿರುವ ಕೆಲಸ ಕಾಣುತ್ತಿದೆ. ಈ ಊರಿನ ಅಳಿಯ ಬೊಮ್ಮಾಯಿಯವರೇ ಕ್ಷೇತ್ರಕ್ಕೆ ಏನು ಮಾಡಿದ್ದೀರಿ ಜನರಿಗೆ ಉತ್ತರಿಸಿ ಎಂದು ಸವಾಲು ಹಾಕಿದ ಮುಖ್ಯಮಂತ್ರಿಗಳು, ಮುಂದೆ ಶಾಸಕ ಮಾನೆಯವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯ ಇದೆ ಎಂದು ಘೋಷಿಸಿದರು.