ನವದೆಹಲಿ: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಗದಗ-ಯಲವಿಗಿ ರೈಲು ಯೋಜನೆಯ ಡಿಪಿಆರ್‌ಗೆ (DPR) ತಕ್ಷಣ ಒಪ್ಪಿಗೆ ನೀಡಿ, ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಅವರು, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

2026ರೊಳಗೆ ಯೋಜನೆ ಆರಂಭಕ್ಕೆ ತಯಾರಿ.
ಗದಗ-ಯಲವಿಗಿ ರೈಲು ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಯೋಜನೆಯ ವಿವರವಾದ ಯೋಜನಾ ವರದಿ (DPR) ಗೆ ಅಂತಿಮ ಅನುಮೋದನೆ ದೊರೆತರೆ, 2026ರ ವೇಳೆಗೆ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ರಾಜ್ಯ ಸರ್ಕಾರಕ್ಕೂ ಒತ್ತಾಯಿಸಿರುವುದಾಗಿ ಬೊಮ್ಮಾಯಿ ತಿಳಿಸಿದರು.

ಸಂಸದರು ಮಂಡಿಸಿದ ಇತರ ಪ್ರಮುಖ ರೈಲ್ವೆ ಬೇಡಿಕೆಗಳು:
ಸಭೆಯಲ್ಲಿ ಕೇವಲ ಗದಗ-ಯಲವಿಗಿ ಮಾತ್ರವಲ್ಲದೆ, ಈ ಭಾಗದ ಇತರ ಮೂರು ಪ್ರಮುಖ ಯೋಜನೆಗಳ ಬಗ್ಗೆಯೂ ಸಚಿವರ ಗಮನ ಸೆಳೆಯಲಾಯಿತು:
ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ: ಈ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರ ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು.
ಗದಗ-ಕುಷ್ಟಗಿ ಹೊಸ ಮಾರ್ಗ: ಗದಗದಿಂದ ನರೇಗಲ್ ಮತ್ತು ಗಜೇಂದ್ರಗಢ ಮಾರ್ಗವಾಗಿ ಕುಷ್ಟಗಿಗೆ ಹೊಸ ರೈಲು ಮಾರ್ಗ ನಿರ್ಮಿಸಬೇಕೆಂಬ ಬಲವಾದ ಬೇಡಿಕೆ ಇದೆ.
ತ್ವರಿತ ಸಮೀಕ್ಷೆ: ಗದಗ-ಕುಷ್ಟಗಿ ಮಾರ್ಗದ ಕಾರ್ಯಸಾಧ್ಯತೆಯ ಬಗ್ಗೆ ತಕ್ಷಣವೇ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸುವಂತೆ ಸಚಿವರಲ್ಲಿ ಕೋರಲಾಯಿತು.
ಈ ರೈಲ್ವೆ ಯೋಜನೆಗಳು ಜಾರಿಯಾದಲ್ಲಿ ಉತ್ತರ ಕರ್ನಾಟಕದ ವಾಣಿಜ್ಯ ಮತ್ತು ಸಾರಿಗೆ ಸಂಪರ್ಕದಲ್ಲಿ ಕ್ರಾಂತಿಕಾರಕ ಬದಲಾವಣೆ ಬರಲಿದೆ. ಕೇಂದ್ರ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.”
-ಬಸವರಾಜ ಬೊಮ್ಮಾಯಿ, ಸಂಸದರು