ಸವಣೂರು: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಕ್ರೋಧಗೊಂಡ ಪೋಷಕರು ಮತ್ತು ಸ್ಥಳೀಯರು ಶಿಕ್ಷಕನಿಗೆ ಧರ್ಮದೇಟು ನೀಡಿ, ಚಪ್ಪಲಿ ಹಾರ ಹಾಕಿ ಪೊಲೀಸ್ ಠಾಣೆಗೆ ಒಪ್ಪಿಸಿದ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದಿದೆ.

ಸವಣೂರು ಪಟ್ಟಣದ ಸರ್ಕಾರಿ ಉರ್ದು ಉನ್ನತೀಕರಿಸಿದ ಶಾಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಜಗದೀಶ್ ಎಂಬಾತನೇ ಧರ್ಮದೇಟು ತಿಂದ ಆರೋಪಿ.

ಕಳೆದ ಸುಮಾರು ಎರಡು ತಿಂಗಳಿನಿಂದ ಈ ಶಿಕ್ಷಕ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯರು ಈ ವಿಷಯವನ್ನು ಪೋಷಕರ ಗಮನಕ್ಕೆ ತಂದ ನಂತರ ಆಕ್ರೋಶಗೊಂಡ ಪೋಷಕರು ಶಾಲೆಗೆ ದಾಳಿ ಮಾಡಿದರು.

ಸ್ಥಳದಲ್ಲೇ ಶಿಕ್ಷಕ ಜಗದೀಶ್‌ಗೆ ತೀವ್ರವಾದ ಧರ್ಮದೇಟು ನೀಡಿದ ಪೋಷಕರು ಮತ್ತು ಸ್ಥಳೀಯರು, ಅವನ ಕತ್ತಿಗೆ ಚಪ್ಪಲಿ ಹಾರ ಹಾಕಿ ಸುಮಾರು ಒಂದೂವರೆ ಕಿಲೋಮೀಟರ್ ದೂರದ ಸವಣೂರು ಪೊಲೀಸ್ ಠಾಣೆಯವರೆಗೆ ಮೆರವಣಿಗೆ ಮೂಲಕ ಕರೆ ತಂದರು.

ಪೋಷಕರು ಆರೋಪಿ ಶಿಕ್ಷಕನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ತೀವ್ರವಾಗಿ ಆಗ್ರಹಿಸಿದ್ದಾರೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.