ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕು ಪಂಚಾಯತ್‌ನಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ ರೂ. 1.97 ಕೋಟಿಗೂ ಅಧಿಕ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಇಂದು (ಡಿ.09) ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಶಿರಹಟ್ಟಿ ತಾಲೂಕು ಪಂಚಾಯತ್‌ಗೆ 2023-24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅಡಿಯಲ್ಲಿ ಮಂಜೂರಾಗಿದ್ದ ಅನುದಾನದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಒಟ್ಟು ರೂ. 2,16,97,377 ಅನುದಾನದಲ್ಲಿ, ಅಂದಾಜು ರೂ. 1,97,20,382 ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಿ ಮತ್ತು ಕಳಪೆ ಕಾಮಗಾರಿಗಳನ್ನು ಕೈಗೊಂಡು ಈ ಭ್ರಷ್ಟಾಚಾರ ಎಸಗಲಾಗಿದೆ.
ಖೋಟಾ ವರದಿ: ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ನಕಲಿ (ಖೋಟಾ) ಥರ್ಡ್ ಪಾರ್ಟಿ ವರದಿಯನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 4 ಜನರ ವಿರುದ್ಧ ಗದಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಮನೆ ಹಾಗೂ ಕಚೇರಿ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಡಾ. ಎನ್. ಹೆಚ್. ಓಲೆಕಾರ: ಹಿರಿಯ ಪಶುವೈದ್ಯಾಧಿಕಾರಿ (ಹಿಂದೆ ಶಿರಹಟ್ಟಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು). ಆರೀಫ್ ಹಿರೇಹಾಳ: ಸಹಾಯಕ ಇಂಜಿನೀಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಧಾರವಾಡ (ಹಿಂದೆ ಶಿರಹಟ್ಟಿಯಲ್ಲಿ ಕಿರಿಯ ಇಂಜಿನೀಯರ್ ಆಗಿದ್ದರು). ಗಂಗಪ್ಪ ಬಸವಣೆಪ್ಪ ತಡಹಾಳ, ಗುತ್ತಿಗೆದಾರರು (ಸಂಜಯ ಎಂಟರ್ಪ್ರೈಸಸ್ ಮತ್ತು ವಿ.ವಿ. ಸೇಲ್ಸ್, ಲಕ್ಕುಂಡಿ). ಪ್ರದೀಪಕುಮಾರ ಬಸವರಾಜಯ್ಯ ಹಿರೇಮಠ, ವಿಜಯನಗರ ಜಿಲ್ಲೆಯ ಹಡಗಲಿ ನಿವಾಸಿ (ನಂದಿ ಲ್ಯಾಬ್ಸ್ ಹೆಸರಿನಲ್ಲಿ ನಕಲಿ ಥರ್ಡ್ ಪಾರ್ಟಿ ವರದಿ ನೀಡಿದ ಖಾಸಗಿ ವ್ಯಕ್ತಿ).
ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ವಿಜಯ ಬಿರಾದಾರ, ಪೊಲೀಸ್ ನಿರೀಕ್ಷಕಿ ಶ್ರೀಮತಿ ಎಸ್.ಎಸ್. ತೇಲಿ, ಶ್ರೀ ಪರಮೇಶ್ವರ ಜಿ. ಕವಟಗಿ ಹಾಗೂ ಗದಗ, ಧಾರವಾಡ ಮತ್ತು ಬೆಳಗಾವಿ ಲೋಕಾಯುಕ್ತ ಸಿಬ್ಬಂದಿಗಳು ಈ ಮಹತ್ವದ ದಾಳಿಯಲ್ಲಿ ಭಾಗವಹಿಸಿದ್ದರು.