ಕೇಂದ್ರದ ಸೂಚನೆ ಮೇರೆಗೆ ರಾಜ್ಯಪಾಲರ ಅನುಮೋದನೆ: ಆಡಳಿತಾತ್ಮಕ ಪತ್ರವ್ಯವಹಾರಗಳಲ್ಲಿ ಇಂದಿನಿಂದಲೇ ‘ಲೋಕಭವನ’ ಎಂದು ಉಲ್ಲೇಖ ಕಡ್ಡಾಯ
ಬೆಂಗಳೂರು: ರಾಜ್ಯದ ರಾಜಕೀಯ ಮತ್ತು ಆಡಳಿತ ಕೇಂದ್ರಗಳಲ್ಲೊಂದಾದ ರಾಜಭವನ, ಕರ್ನಾಟಕ ಸಂಸ್ಥೆಯ ಹೆಸರನ್ನು ಐತಿಹಾಸಿಕವಾಗಿ ಬದಲಾಯಿಸಲಾಗಿದೆ. ಇನ್ನು ಮುಂದೆ ಈ ಸಂಸ್ಥೆಯನ್ನು “ಲೋಕಭವನ, ಕರ್ನಾಟಕ” ಎಂದು ಕರೆಯಲಾಗುತ್ತದೆ ಎಂದು ರಾಜ್ಯಪಾಲರ ಕಚೇರಿ (Governor’s Secretariat) ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಐಎಎಸ್, ಅವರಿಗೆ ಬರೆದ ಪತ್ರದಲ್ಲಿ ಈ ಬದಲಾವಣೆಯನ್ನು ಖಚಿತಪಡಿಸಿದ್ದಾರೆ. ಬದಲಾವಣೆಗೆ ಕಾರಣ ಮತ್ತು ಜಾರಿರಾಜಭವನದ ಹೆಸರು ಬದಲಾವಣೆಯು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಡೆದಿದೆ.
ಭವಿಷ್ಯದ ಪತ್ರವ್ಯವಹಾರಕ್ಕೆ ಸೂಚನೆ
“ರಾಜಭವನ, ಕರ್ನಾಟಕ” ಸಂಸ್ಥೆಯನ್ನು ಇನ್ನು ಮುಂದೆ “ಲೋಕಭವನ, ಕರ್ನಾಟಕ” ಎಂದು ಉಲ್ಲೇಖಿಸಬೇಕು. ಭವಿಷ್ಯದ ಎಲ್ಲಾ ಪತ್ರವ್ಯವಹಾರಗಳಲ್ಲಿ “ರಾಜಭವನ, ಕರ್ನಾಟಕ” ಎಂದು ನಮೂದಿಸುವ ಬದಲು “ಲೋಕಭವನ, ಕರ್ನಾಟಕ” ಎಂದು ನಮೂದಿಸುವಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.
ಈ ಬದಲಾವಣೆಯ ಕುರಿತು ಭಾರತದ ರಾಷ್ಟ್ರಪತಿಗಳ ಸಚಿವಾಲಯ, ಪ್ರಧಾನ ಮಂತ್ರಿಗಳ ಕಾರ್ಯಾಲಯ, ಸುಪ್ರೀಂ ಕೋರ್ಟ್, ಎಲ್ಲಾ ರಾಜ್ಯಗಳ ರಾಜ್ಯಪಾಲರ ಕಚೇರಿಗಳು ಮತ್ತು ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳು, ಇಲಾಖಾ ಮುಖ್ಯಸ್ಥರುಗಳಿಗೆ ಮಾಹಿತಿ ರವಾನಿಸಲಾಗಿದೆ.