ಗದಗ: ಹಾವೇರಿ ಜಿಲ್ಲೆಯ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಇದೇ ಡಿಸೆಂಬರ್ 14 ಮತ್ತು 15 ರಂದು ಅಂಬಿಗರ ಸಮುದಾಯದ ಐತಿಹಾಸಿಕ ಕಾರ್ಯಕ್ರಮವಾದ 10ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ರಥೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಗದಗ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಅವರು, ಡಿ. 14ರಂದು ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ ಲೋಕಾರ್ಪಣೆ. ಕಂಚಿನ ಪುತ್ಥಳಿ ಲೋಕಾರ್ಪಣೆ. ಶ್ರೀ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪದ ಉದ್ಘಾಟನೆ ನೆರವೇರಲಿದೆ.
ಜೊತೆಗೆ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಐಕ್ಯಮಂಟಪ ಪೂಜೆ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ ಕಾರ್ಯಕ್ರಮ, ರಾಜ್ಯಮಟ್ಟದ ಪ್ರತಿಭಾಪುರಸ್ಕಾರ, ಶ್ರೀ ಶಾಂತಮುನಿ ಶ್ರೀಗಳ 10ನೇ ಸ್ಮರಣೋತ್ಸವ, ಗಂಗಾರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಡಿ. 15ರಂದು ಧರ್ಮ ಧ್ವಜಾರೋಹಣ ಮತ್ತು ಧರ್ಮಸಭೆ, ಶಿಲಾಮಂಟಪ ಮತ್ತು ಕಂಚಿನ ಪುತ್ಥಳಿ ಲೋಕಾರ್ಪಣೆ, ಅಂಬಿಗರ ಚೌಡಯ್ಯನವರ 906ನೇ ಜಯಂತ, ವಚನಗ್ರಂಥ ಮಹಾ ರಥೋತ್ಸವ ಜರುಗಲಿದೆ ಎಂದರು.
ಈ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು ಮತ್ತು ಶಾಸಕರನ್ನು ಆಹ್ವಾನಿಸಲಾಗಿದೆ. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸುವ ಭರವಸೆ ಇದೆ. ಈ ಸಂದರ್ಭವನ್ನು ಬಳಸಿಕೊಂಡು, ರಾಜ್ಯದಲ್ಲಿ 37 ಪದಗಳಿಂದ ಗುರುತಿಸಲ್ಪಡುವ ಅಂಬಿಗರ ಸಮಾಜವನ್ನು ಎಸ್.ಟಿ. ಪಟ್ಟಿಗೆ (Scheduled Tribe – ST Status) ಸೇರ್ಪಡೆ ಮಾಡುವಂತೆ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸ್ವಾಮೀಜಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬಿಗರ ಸಮಾಜದ ಮುಖಂಡರಾದ ಮಂಜುನಾಥ ಪುಟಗನಾಳ, ಬಸವರಾಜ ಸಪ್ಪನಗೋಳ, ಜೆ.ಬಿ. ಗಾರವಾಡ, ಕಾಶಪ್ಪ ಬಳಗಾನೂರ ಸೇರಿದಂತೆ ಹಲವು ಸಮಾಜದ ಮುಖಂಡರು ಉಪಸ್ಥಿತರಿದ್ದರು.